ಬೆಂಗಳೂರು: ನಗರದ ಉಳ್ಳಾಲದಲ್ಲಿರುವ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಲೆದರ್ ಮತ್ತು ಫ್ಯಾಷನ್ ಟೆಕ್ನಾಲಜಿ (ಕಿಲ್ಟ್)ಯಲ್ಲಿ ವಿದ್ಯಾರ್ಥಿಗಳಿಗೆ ಯುವ ನಾಯಕತ್ವ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ದಿ ಆರ್ಟ್ ಆಫ್ ಲಿವಿಂಗ್ ಸಹಯೋಗದೊಂದಿಗೆ ಒಂದು ವಾರಗಳ ಕಾಲ ಹಮ್ಮಿಕೊಳ್ಳಲಾದ ಕಾರ್ಯಗಾರ ಇತ್ತೀಚೆಗೆ ಮುಕ್ತಾಯಗೊಂಡಿದೆ.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಮಾನಂದ್ ಮಾತನಾಡಿ, ಇಂದಿನ ಮಕ್ಕಳು ಕಲಿಕೆಯ ಜೊತೆಗೆ ಆತ್ಮವಿಶ್ವಾಸ, ಧೈರ್ಯ ಮತ್ತು ಧ್ಯಾನವನ್ನು ಅಳವಡಿಸಿಕೊಳ್ಳಬೇಕು. ದೇಶಕ್ಕೆ ಕೊಡುಗೆ ನೀಡುವ ಹೊಣೆಗಾರಿಕೆ ಬೆಳೆಸಿಕೊಳ್ಳುವುದರ ಜೊತೆಗೆ ಬದುಕಿಗೆ ಬೇಕಾದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು, ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಲೆದರ್ ಮತ್ತು ಫ್ಯಾಷನ್ ಟೆಕ್ನಾಲಜಿ (ಕಿಲ್ಟ್) ನಿರ್ದೇಶಕರಾದ ಸಿದ್ದಲಿಂಗಪ್ಪ ಬಿ. ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಬಲವಾಗಬೇಕು ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡುವಂತಾಗಬೇಕು.
ಈಗ ಕಲಿತು ಅಳವಡಿಕೊಂಡ ಗುಣಗಳೇ ನಮ್ಮ ಭವಿಷ್ಯವನ್ನ ನಿರ್ಧರಿಸಬಲ್ಲವು. ಈ ನಿಟ್ಟಿನಲ್ಲಿ ಮಕ್ಕಳು ಈ ಶಿಬಿರದಲ್ಲಿ ಹೇಳಿಕೊಟ್ಟ ಸಂಗತಿಗಳನ್ನ ಮನದಟ್ಟು ಮಾಡಿಕೊಂಡು ನಿತ್ಯ ಅನುಸರಿಸಿದರೆ ಜೀವನದಲ್ಲಿ ಯಶಸ್ವಿಯಾಗುವುದರಲ್ಲಿ ಯಾವ ಸಂದೇಹವಿಲ್ಲ, ಎಂದು ಹೇಳಿದರು.
ಒಂದು ವಾರಗಳ ನಡೆದ ಕಾರ್ಯಗಾರದಲ್ಲಿ ದಿ ಆರ್ಟ್ ಆಫ್ ಲಿವಿಂಗ್‌ನ ತರಬೇತುದಾರರಾದ ಶ್ವೇತ ಮತ್ತು ಚನ್ನವೀರ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಈ ವೇಳೆ ನಾಯಕತ್ವ ಬೆಳೆಸಿಕೊಳ್ಳುವುದು ಹೇಗೆ, ವೇದಿಕೆಯಲ್ಲಿ ಯಾವುದೇ ಭಯವಿಲ್ಲದೆ ಮಾತನಾಡುವುದು ಹೇಗೆ, ವಿದ್ಯಾರ್ಥಿಗಳಿಗೆ ಧ್ಯಾನ ಮತ್ತು ಯೋಗ ಅನುಸರಿಸುವ ಕ್ರಮಗಳನ್ನು ತಿಳಿಸಿಕೊಡಲಾಯಿತು.
ವಿಶೇಷವಾಗಿ ಕಾರ್ಯಗಾರದ ಕೊನೆಯ ದಿನ ಕಾಲೇಜಿನ ಆವರಣದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಈ ವೇಳೆ ಮೀಡಿಯಾ ಕನೆಕ್ಟ್ ಸಂಸ್ಥಾಪಕರು ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ, ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲರಾದ ರಂಜನ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.