ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ವೇತನ ಪರಿಷ್ಕರಣೆ 2024 ಮುನ್ನೆಲೆಗೆ ಬಂದಿದ್ದು ಸರಿ ಸಮಾನ ವೇತನ ನಿರ್ಧಾರ ತೆಗೆದುಕೊಳ್ಳುವ ಮೂಲಕ ವೇತನ ಪರಿಷ್ಕರಣೆ ಮಾಡುವ ಸುಳಿವನ್ನು ಸಾರಿಗೆ ಸಚಿವರು ನೀಡಿದ್ದಾರೆ.
ಸಾರಿಗೆಯ ಜಂಟಿ ಕ್ರಿಯಾ ಸಮಿತಿ ಕಳೆದ 2024ರ ಡಿ.31ರಂದು ಮುಷ್ಕರ ಮಾಡುವುದಾಗಿ ಹೇಳಿಕೆ ನೀಡಿತ್ತು. ಈ ಮುಷ್ಕರಕ್ಕೆ ಬಿಜೆಪಿ ಕೂಡ ಬೆಂಬಲ ನೀಡುವುದಾಗಿ ಸುದ್ದಿಗೋಷ್ಠಿ ಕರೆದು ಘೋಷಣೆಕೂಡ ಮಾಡಿತ್ತು. ಇದರಿಂದ ಮುಂದೆ ಸರ್ಕಾರಕ್ಕೆ ತೊಂದರೆ ಆಗುವುದು ಗ್ಯಾರಂಟಿ ಎಂದು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆ ಕರೆದು ಇದೇ ಸಂಕ್ರಾಂತಿ ಆದ ಬಳಿಕ ವೇತನದ ಬಗ್ಗೆ ಸಭೆ ಕರೆಯೋಣ ಎಂದು ಹೇಳಿ ಮುಷ್ಕರ ನಿಲ್ಲಿಸಿದರು.
ಹೀಗೆ ಸಿಎಂ ಜತೆ ಸಭೆ ನಡೆಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕೂಡ ಜನವರಿ 14ರಂದು ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಎಲ್ಲ ಸಂಘಟನೆಗಳ ಮುಖಂಡರ ಸಭೆ ಕರೆದು ವೇತನ ಪರಿಷ್ಕರಣೆ ಮಾಡುವ ಸುಳಿವನ್ನು ನೀಡಿದ್ದಾರೆ. ಅದರ ಜತೆಗೆ ಎಷ್ಟು ಎಂಬ ಪ್ರಶ್ನೆಗೂ ಮಾಸಾಗಿ ಉತ್ತರ ನೀಡಿದ್ದು, ನಾವು ಚುನಾವಣೆಯಲ್ಲಿ ಕೊಟ್ಟಿರುವ ಭರವಸೆಯಂತೆ ನೆದುಕೊಳ್ಳುತ್ತೇವೆ ಎಂಬ ಸುಳಿವನ್ನು ನೀಡಿದ್ದಾರೆ.
ಇದು ಹೀಗೆ ಮುಂದುವರಿದರೆ ಸಾರಿಗೆ ನೌಕರರು ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಪಡೆಯುವ ಮೂಲಕ ಈ ನಾಲ್ಕು ವರ್ಷಕ್ಕೊಮ್ಮೆ ಬೀದಿಗಳಿಯುವುದು ತಪ್ಪುತ್ತದೆ. ಮತ್ತೆ ಅಗ್ರಿಮೆಂಟ್ ಆದರೆ ಈಗಾಗಲೇ ಶೇ.40ರಿಂದ 45ರಷ್ಟು ಕಡಿಮೆ ಪಡೆಯುತ್ತಿರುವ ನೌಕರರಿಗೆ ಮುಂದೆ ಸುಮಾರು ಶೇ.55ರಷ್ಟು ಕಡಿಮೆ ವೇತನ ಪಡೆಯುವ ಸಾಧ್ಯತೆ ದಡ್ಡವಾಗಿದೆ. ಹೀಗಾಗಿ ನೌಕರರಿಗೆ ಆರ್ಥಿಕ ಸಮಸ್ಯೆ ಆಗದಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದು ಒಕ್ಕೂಟದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಇವರೆಗೂ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿಯನ್ನೂ ಕೊಟ್ಟಿಲ್ಲ. ಜತೆಗೆ ಕೆಲ ಡಿಎ ಹಿಂಬಾಕಿ ಈಗಲೂ ಬಾಕಿ ಇದೆ. ಈ ಎಲ್ಲದರ ನಡುವೆಯೇ ಸರಿ ಸಮಾನ ವೇತನ ಘೋಷಣೆ ಮಾಡಿದರೆ ಅಹಿಂದ ಪರ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ನಿಜವಾಗಲು ಆರ್ಥಿಕವಾಗಿ ಹಿಂದುಳಿದವರ ಪರ ನಿಂತಿದ್ದಾರೆ ಎಂಬುವುದನ್ನು ಸಾಬೀತುಪಡಿಸಿದಂತಾಗುತ್ತದೆ.
ಒಗ್ಗಟ್ಟು ಈಗ ಕಾಣುತ್ತಿದೇವೆ: ನೌಕರರು ಮತ್ತು ಅಧಿಕಾರಿಗಳಲ್ಲಿ ಈವರೆಗೂ ಇಲ್ಲದ ಒಗ್ಗಟ್ಟು ಈಗ ಕಾಣುತ್ತಿದೇವೆ ಮುಂದೆ ಇವರೆಲ್ಲರೂ ಒಂದಾದರೆ ಇವರ ನಡುವೆ ಇರುವ ಕಂದಕವನ್ನ ಮುಚ್ಚಿದಂತಾಗುತ್ತದೆ. ಜತೆಗೆ ನೌಕರರಲ್ಲದ ಸಂಘಟನೆಗಳ ಮುಖಂಡರು ಮೂಗು ತೂರಿಸುವುದು ತನ್ತಾನೆ ನಿಲ್ಲುತ್ತದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈಗಲಾದರೂ ಕಾಂಗ್ರೆಸ್ ಸರ್ಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನವನ್ನು ಸಾರಿಗೆ ನೌಕರರಿಗೂ ಕೊಡುವುದಕ್ಕೆ ಮುಂದಾಗಿರುವುದು ಖುಷಿ ಇದೆ. ಆದರೆ ಈ ನಿಟ್ಟಿನಲ್ಲಿ ಸಂಘಟನೆಗಳು ಕೂಡ ನೌಕರರ ಪರ ನಿಲುವನ್ನು ತಾಳಬೇಕಿದೆ.
ಸುಮ್ಮನೆ ಕೂರುವುದು ತರವಲ್ಲ: ಅಲ್ಲದೆ ಸರ್ಕಾರ ಸಂಕ್ರಾಂತಿ ಬಳಿಕ ಸಭೆ ಕರೆಯುತ್ತೇವೆ ಎಂದು ಹೇಳಿರುವುದಕ್ಕೆ ಒಕ್ಕೂಟ ಒಪ್ಪಿ ಸುಮ್ಮನೆ ಕೂರುವುದು ತರವಲ್ಲ. ಸರ್ಕಾರ ಮತ್ತು ಸಾರಿಗೆ ಸಚಿವರಿಗೆ ಪದೇಪದೆ ಈ ಬಗ್ಗೆ ನೆನಪಿಸುವ ಕೆಲಸವನ್ನು ನಿರಂತರವಾಗಿ ಮಾಡದಬೇಕು. ಅಲ್ಲದೆ ನೌಕರರ ಅಭಿಪ್ರಾಯವನ್ನು ತಲುಪಿಸುತ್ತಲೇ ಇರಬೇಕು. ಇಲ್ಲದಿದ್ದರೆ ಸರ್ಕಾರ ತಟಸ್ಥವಾಗಿ ಸಭೆಯನ್ನು ಮುಂದೂಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಇಲ್ಲದಿದ್ದರೆ ಮತ್ತದೆ ಹೋರಾಟ: ಸರಿ ಸಮಾನ ವೇತನ ಆಗುವುದದರಿಂದ ನಾಲ್ಕೂ ನಿಗಮದ ಅಧಿಕಾರಿಗಳು ಮತ್ತು ನೌಕರರಿಗೆ ಪ್ರತಿ 4 ವರ್ಷಕ್ಕೊಮ್ಮೆ ಎದುರಾಗುತ್ತಿರುವ ಈ ದೊಡ್ಡ ತಲೆನೋವು ತಪ್ಪಿದಂತಾಗುತ್ತದೆ, ಇಲ್ಲದಿದ್ದರೆ ಮತ್ತದೆ ಹೋರಾಟ, ಅಮಾನತು, ವಜಾ, ಪೊಲೀಸ್ ಪ್ರಕರಣ ಎಂಬ ಬಲೆಗೆ ಸಿಲುಕಿ ಅಮಾಯಕ ನೌಕರರು ಒದ್ದಾಡಬೇಕಾಗುತ್ತದೆ. ಅಧಿಕಾರಿಗಳು ಕೂಡ ವಿಧಿಯಿಲ್ಲದೆ ನೌಕರರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗುತ್ತದೆ.
ಪ್ರಚಾರ ಪ್ರಿಯರಿಂದ ಪ್ರಚಾರ ಸಲ್ಲ: ಹೀಗಾಗಿ ಒಕ್ಕೂಟ ಈ ಬಗ್ಗೆ ವಾಟ್ಸ್ಆಪ್ ಗ್ರೂಪ್ಗಳಲ್ಲಿ ಸರಿ ಸಮಾನ ವೇತನ ಆಗೆಬಿಟ್ಟಿದೆ ಎಂಬಂತೆ ಪ್ರಚಾರ ಪ್ರಿಯರಿಂದ ಪ್ರಚಾರ ಮಾಡಿಸುವುದನ್ನು ಬಿಟ್ಟು ಜತೆಗೆ ಬೇಡದ ವಿಷಯಗಳ ಬಗ್ಗೆ ಕಾಲೆಳೆಯುವುದನ್ನು ಬಿಟ್ಟು ಸರಿ ಸಮಾನ ವೇತನ ಕೊಡಲು ಮನಸ್ಸಿರುವ ಸರ್ಕಾರಕ್ಕೆ ಅದನ್ನು ಘೋಷಣೆ ಮಾಡಿಸುವ ಮೂಲಕ ಜಾರಿಯಾಗುವಂತೆ ಮನವೊಲಿಸುವ ಕೆಲಸವನ್ನು ಒಕ್ಕೂಟ ಈ ಉಳಿದ ಕೆಲವೇ ಕೆಲವು ದಿನಗಳಲ್ಲಿ ಮಾಡಬೇಕಿದೆ.