ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ತೆರೆಮೇಲೆ ಏ.7ರಂದು ಬರಲಿದ್ದಾರೆ ಪ್ರಜ್ವಲ್ ದೇವರಾಜ್
ಬೆಂಗಳೂರು: ಈಗಾಗಲೇ ನಾನಾ ರೀತಿಯ ಪಾತ್ರಗಳನ್ನು ಮಾಡಿರುವ ಪ್ರಜ್ವಲ್ ದೇವರಾಜ್, ಇದೇ ಮೊದಲ ಬಾರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ನಟಿಸಿದ್ದಾರೆ.
ವೀರಂ ಚಿತ್ರದಲ್ಲಿ ಅವರದ್ದು ವಿಷ್ಣುವರ್ಧನ್ ಅಭಿಮಾನಿ ಪಾತ್ರವಾಗಿದ್ದು, ಈ ಸಿನಿಮಾವನ್ನು ನೋಡಲು ವಿಷ್ಣು ಅಭಿಮಾನಿಗಳು ತುದಿಗಾಲಲಿಲ್ಲ ನಿಂತಿದ್ದಾರೆ. ಮಾಸ್ ಮತ್ತು ಕ್ಲಾಸ್ ಅಂಶಗಳನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿದೆ.
ನಿರ್ಮಾಪಕ ಕೆ.ಎಂ. ಶಶಿಧರ್ (Shashidhar) ಅವರು ತಮ್ಮ ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ನ ಮೂರನೇ ಪ್ರಾಜೆಕ್ಟ್ ಆಗಿ ಎಮೋಷನಲ್, ಆಕ್ಷನ್, ಥ್ರಿಲ್ಲರ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ‘ವೀರಂ’ (Veeram) ಚಿತ್ರವನ್ನು ನಿರ್ಮಿಸಿದ್ದಾರೆ. ಡಾಟರ್ ಆಫ್ ಪಾರ್ವತಮ್ಮ, ಶುಗರ್ಲೆಸ್ ಚಿತ್ರದ ನಂತರ ಈಗ ಆಕ್ಷನ್ ಥ್ರಿಲ್ಲರ್ ಜಾನರ್ ಚಿತ್ರದೊಂದಿಗೆ ಬರುತ್ತಿದ್ದಾರೆ.
ಪ್ರಜ್ವಲ್ ದೇವರಾಜ್, ರಚಿತಾರಾಮ್ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಖದರ್ ಕುಮಾರ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಏಪ್ರಿಲ್ 7ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿ. ಖದರ್ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ಹಿರಿಯನಟಿ ಶೃತಿ (Shruti), ಅಕ್ಕ ತಮ್ಮನಾಗಿ ಅಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ.
ಎಮೋಷನಲ್ ಥ್ರಿಲ್ಲರ್ ಡ್ರಾಮಾ ಜೊತೆಗೆ ಕಂಪ್ಲೀಟ್ ಪ್ಯಾಕೇಜ್ಡ್ ಮೂವೀ ಇದಾಗಿದ್ದು, ಸೆಕೆಂಡ್ ಹಾಫ್ನಲ್ಲಿ ಥ್ರಿಲ್ಲರ್ ಅಂಶವಿದೆ. ಜೊತೆಗೆ ಶಿಷ್ಯ ದೀಪಕ್(Shishya Deepak) ಮೊದಲಬಾರಿಗೆ ಪೂರ್ಣಪ್ರಮಾಣದ ಖಳನಾಯಕನಾಗಿ ನಟಿಸಿದ್ದಾರೆ. ವಿಶೇಷವಾಗಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾತ್ರವನ್ನಿಟ್ಟುಕೊಂಡು ಕಥೆ ಹೇಳಲಾಗಿದೆ. ಹಾಗಾಗಿ ಈ ಸಿನಿಮಾವನ್ನು ವಿಷ್ಣು ಅವರಿಗೇ ಅರ್ಪಣೆ ಮಾಡಿದೆ ಚಿತ್ರತಂಡ.