ದಾವಣಗೆರೆ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಶಾಸಕ ಸಿ.ಟಿ.ರವಿ ಅವರನ್ನು ದಾವಣಗೆರೆಯಲ್ಲಿ ಪೊಲೀಸರು ಬಿಡುಗಡೆ ಮಾಡಿದ್ದು. ಅಲ್ಲೇ ನೆರದಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ ಅದ್ದೂರಿ ಸ್ವಾಗತ ಕೋರಿದರು.
ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಸಿ.ಟಿ.ರವಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ವಶದಲ್ಲಿರಿಸಲಾಗಿತ್ತು. ನಂತರ ಶುಕ್ರವಾರ ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲು ಪೊಲೀಸರು ಕಾರಿನಲ್ಲಿ ಕರೆತರುತ್ತಿದ್ದರು.
ಪ್ರಕರಣ ಸಂಬಂಧ ಇಂದು ಮಧ್ಯಾಹ್ನ ಹೈಕೋರ್ಟ್ ತುರ್ತು ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿ ತಕ್ಷಣವೇ ಶಾಸಕ ಸಿ.ಟಿ.ರವಿ ಅವರನ್ನು ಎಲ್ಲಿದ್ದಾರೋ ಅಲ್ಲೇ ಬಿಡುಗಡೆ ಮಾಡಬೇಕು ಎಂದು ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತು.
ಕೋರ್ಟ್ ಆದೇಶದ ಹೊತ್ತಿಗೆ ಸಿ.ಟಿ.ರವಿ ಅವರನ್ನು ಪೊಲೀಸರು ದಾವಣಗೆರೆ ಹತ್ತಿರ ಕಾರಿನಲ್ಲಿ ಕರೆತರುತ್ತಿದ್ದರು. ಕೋರ್ಟ್ ಆದೇಶ ಗಮನಿಸಿ ದಾವಣಗೆರೆಯಲ್ಲಿ ಪೊಲೀಸರು ಬಿಟ್ಟು ಹೋಗಿದ್ದಾರೆ.
ಇನ್ನು ಇತ್ತ ಪಕ್ಷದ ನಾಯಕನನ್ನು ಬೆಳಗಾವಿಯಿಂದಲೂ ಬಿಜೆಪಿ ಕಾರ್ಯಕರ್ತರು ಹಿಂಬಾಲಿಸಿಕೊಂಡು ಬಂದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಕೂಡ ಸಿ.ಟಿ.ರವಿ ಇದ್ದ ಪೊಲೀಸ್ ವಾಹನದ ಹಿಂದೆಯೇ ಬರುತ್ತಿದ್ದರು.
ಸತ್ಯಮೇವ ಜಯತೆ: ಹೈ ಕೋರ್ಟ್ ಆದೇಶದಿಂದ ಪೊಲೀಸ್ ವಶದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಮುಕ್ತವಾಗಿ ಬರುತ್ತಿದ್ದಂತೆ ಸತ್ಯಮೇವ ಜಯತೆ.. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೋರ್ಟ್‌ನಿಂದ ಬಿಡುಗಡೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವೇನು ಮಾತನಾಡಿದ್ವಿ ಮತ್ತು ಅವರೇನು ಮಾತನಾಡಿದ್ರು ಎನ್ನುವುದಕ್ಕೆ ಕಸ್ಟೋಡಿಯನ್ ನಮ್ಮ ಪರಿಷತ್‌ನ ಸಭಾಪತಿಗಳು. ಸಭಾಪತಿಗಳೇ ರೂಲಿಂಗ್ ಕೊಟ್ಟರು.
ಅದಾದ ಬಳಿಕವೂ ಅವರು ಸದನದಲ್ಲಿ ಯಾವ ರೀತಿ ನಡೆದುಕೊಂಡರು ಎಂಬುದನ್ನು ನೋಡಿದ್ದೀರಿ. ಹಲ್ಲೆಗೆ ಪ್ರಯತ್ನಿಸಿದರು. ನಿನ್ನೆ ರಾತ್ರಿಯಿಡೀ ನಮ್ಮ ಮೇಲೆ ದೌರ್ಜನ್ಯ ಎಸಗಿದರು ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದುರವಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಗೆ ಜಾಮೀನು ನೀಡಿದೆ. ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತು.
ಬಿಜೆಪಿ ಶಾಸಕ ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.