ಹಾಸನ: ಹೊಸ ವರ್ಷದ ಸಂಭ್ರಮದಲ್ಲಿ ಸ್ನೇಹಿತರೊಟ್ಟಿಗೆ ಇದ್ದ ಪ್ರಿಯಕರನೊಂದಿಗೆ ಜಗಳ ಮಾಡಿದ ಪ್ರೇಯಸಿಯೊಬ್ಬಳು, ಏಕಾಏಕಿ ಚಾಕು ಇರಿದ ಘಟನೆ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ತಡರಾತ್ರಿ ನಡೆದಿದೆ.
ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ (25) ಚಾಕು ಇರಿತಕ್ಕೊಳಗಾದ ಯುವಕ. ಭವಾನಿ ಎಂಬಾಕೆಯೆ ಚಾಕು ಇರಿದ ಯುವತಿ.
ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಏಕೋ ಗೊತ್ತಿಲ್ಲ ಕೆಲ ದಿನಗಳಿಂದ ದೂರವಾಗಿದ್ದರು ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜತೆ ಖಾಸಗಿ ಹೋಟೆಲ್‍ಗೆ ಮನುಕುಮಾರ್ ಹೋಗಿದ್ದಾಗ. ಈ ವೇಳೆ ಯುವತಿ ಪದೇಪದೇ ಮನುಕುಮಾರ್‌ಗೆ ಕರೆ ಮಾಡಿದ್ದಾಳೆ. ಈ ನಡುವೆ ಏನು ನಡೆಯಿತೋ ಗೊತ್ತಿಲ್ಲ.
ತಡರಾತ್ರಿ 12:30ರ ವೇಳೆಗೆ ಹೋಟೆಲ್ ಬಳಿಗೆ ಬಂದ ಭವಾನಿ, ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಪ್ರವೇಶಿಸಿದ್ದಾಳೆ. ಅಷ್ಟರಲ್ಲಿ ಗೇಟ್ ಬಳಿ ಮನುಕುಮಾರ್ ಬಂದಿದ್ದಾನೆ. ಆಗ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಸ್ನೇಹಿತರು ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲೇ ಯುವತಿ ಆತನಿಗೆ ಏಕಾಏಕಿ ಚಾಕು ಹಾಕಿದ್ದಾಳೆ.
ಇರಿತಕ್ಕೊಳಗಾಗಿ ಗಾಯಗೊಂಡ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ವಿಷಯ ತಿಳಿಯುತ್ತಿದ್ದ ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)