ಮುಂಬೈ: ಆನ್ಲೈನ್ ಮಾರುಕಟ್ಟೆಯ ದೈತ್ಯ ಸಂಸ್ಥೆಯಾಗಿರುವ ಅಮೆಜಾನ್ ಆರ್ಥಿಕತೆಯ ಹಿಂಜರಿತದ ಕಾರಣ ನೀಡಿ ಮತ್ತೆ ತನ್ನ 18 ಸಾವಿರ ಉದ್ಯೋಗಿಗಳ ಕೆಲಸ ಬಿಡಿಸಲು ಮುಂದಾಗಿದೆ.
ಕಳೆದ 2022ರ ನವೆಂಬರ್ನಲ್ಲಿ 10 ಸಾವಿರ ಉದ್ಯೋಗಿಗಳನ್ನು ತೆಗೆದುಹಾಕಿದ್ದ ಅಮೆಜಾನ್ ಈಗ ಮತ್ತೆ 18 ಸಾವಿರ ನೌಕರರನ್ನು ವಜಾಗೊಳಿಸಲು ತೀರ್ಮಾನ ತೆಗೆದುಕೊಂಡಿದೆ. ಇದು ಜಾಗತಿಕ ಆರ್ಥಿಕ ಕುಸಿತದ ಕರಾಳ ಪರಿಣಾಮವಾಗಿದ್ದು ಲಕ್ಷಾಂತರ ಜನರ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದೇ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ನಾವು ಕೇವಲ 18 ಸಾವಿರ ನೌಕರರನ್ನಷ್ಟೇ ತೆಗೆದುಹಾಕಲು ನಿರ್ಧರಿಸಿದ್ದೇವೆ ಎಂದು ಅಮೆಜಾನ್ ಸಿಇಒ ಆಂಡಿ ಜಸ್ಸಿ ತಮ್ಮ ಸಿಬ್ಬಂದಿಗೆ ಕಳುಹಿಸಿರುವ ಹೇಳಿಕೆ ಪತ್ರದಲ್ಲಿ ತಿಳಿಸಿದ್ದಾರೆ.
ಈ ರೀತಿಯ ಉದ್ಯೋಗ ಕಡಿತ ಜನರಿಗೆ ಕಷ್ಟಕರವಾಗಲಿದೆ ಎಂಬುದು ನಮಗೆ ಆಳವಾಗಿ ತಿಳಿದಿದೆ. ನಾವು ಈ ನಿರ್ಧಾರಗಳನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಕೆಲಸ ಕಳೆದುಕೊಂಡವರಿಗೆ ಬೇರ್ಪಡಿಕೆಯ ಪಾವತಿ, ಆರೋಗ್ಯ ವಿಮೆ ಮತ್ತು ಪರ್ಯಾಯ ಕೆಲಸಕ್ಕೆ ಸಹಾಯ ಮಾಡುವ ಪ್ಯಾಕೇಜ್ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಮೆಜಾನ್ ಕಂಪನಿಗೆ ಆರ್ಥಿಕ ಹಿಂಜರಿತದ ಹೊಡೆತ ಬಿದ್ದಿದ್ದು, ಅದು ಈಗಲೂ ಮುಂದುವರಿಯುತ್ತಿದೆ. ಮುಂದಿನ ಅನಿಶ್ಚಿತ ಆರ್ಥಿಕತೆಯ ದೃಷ್ಟಿಯಿಂದ ಈ ಕ್ರಮಗಳು ಅನಿವಾರ್ಯವಾಗಿದೆ. ಇದು ಜನವರಿ 18 ರಿಂದ ಈ ಕೆಲಸ ಕಡಿತ ಯೋಜನೆ ಜಾರಿಗೊಳ್ಳಲ್ಲಿದೆ ಎಂದು ತಿಳಿಸಿರುವ ಅವರು, ನಮ್ಮ ಕಂಪನಿಯ ನೌಕರರೊಬ್ಬರು ಈ ವಿಷಯವನ್ನು ಬಹಿರಂಗಗೊಳಿಸುತ್ತಿದ್ದರಿಂದ ನಾವೇ ದಿಢೀರ್ ಎಂದು ಈ ಘೋಷಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ನಮ್ಮ ಕಂಪನಿ ಸುಮಾರು 15 ಲಕ್ಷ ನೌಕರರನ್ನು ಹೊಂದಿದೆ ಎಂದು ಹೇಳಿಕೊಂಡಿದ್ದು, ಕೊರೊನಾ ಸಾಂಕ್ರಾಮಿಕದ ಕಾರಣಕ್ಕಾಗಿ ಹೇರಲಾದ ಲಾಕ್ಡೌನ್ ಸಂದರ್ಭದಲ್ಲಿ ಅಮೆಜಾನ್ ಅತಿ ಹೆಚ್ಚು ಕೆಲಸಗಾರರನ್ನು ನೇಮಿಸಿಕೊಂಡಿತ್ತು. ಆಗಿನ ಜನರ ಬೇಡಿಕೆಗೆ ಕೆಲಸಗಾರರ ಅಗತ್ಯವಿತ್ತು. ಆದರೆ ಎರಡು ವರ್ಷಗಳ ನಂತರ ಆನ್ಲೈನ್ ಬೇಡಿಕೆ ಕುಗ್ಗಿದಂತೆ ನೌಕರರನ್ನು ತೆಗೆಯುವುದು ಅನಿರ್ವಾಯವಾಗಿದೆ ಎಂದೂ ಹೇಳಿದೆ.
ಇನ್ನು ಈ ಅಮೆಜಾನ್ ಕಂಪನಿ ಮಾತ್ರವಲ್ಲದೆ ಹಲವಾರು ಕಂಪನಿಗಳು ಸಹ ಉದ್ಯೋಗಿಗಳ ವಜಾದಲ್ಲಿ ನಿರತವಾಗಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿರುದ್ಯೋಗದ ಪ್ರಮಾಣ ತೀವ್ರತರದಲ್ಲಿ ಹೆಚ್ಚಾಗುವ ಸಾಧ್ಯತೆಯಿದ್ದು ಇದು ದೇಶದ ಮತ್ತು ರಾಜ್ಯದ ಜನರ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
[wp-rss-aggregator limit=”3″]
![](https://vijayapatha.in/wp-content/uploads/2024/02/QR-Code-VP-1-1-300x62.png)