ಬೆಂ. ಗ್ರಾ.: ಹೋಟೆಲ್, ಬೇಕರಿ, ಬೀದಿಬದಿ ಆಹಾರ ಘಟಕಗಳು ಹಾಗೂ ಇತರೆ ಆಹಾರ ತಯಾರಿಕಾ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಸುದ್ದಿಗಳು ಕಂಡುಬರುತ್ತಿರುತ್ತವೆ. ಆಹಾರ ತಯಾರಿಕೆಗೆ ಕಳಪೆ ಗುಣಮಟ್ಟದ ಪದಾರ್ಥಗಳ ಬಳಕೆ, ಒಮ್ಮೆ ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡುವುದು. ಇಂತಹ ಕಳಪೆ ಗುಣಮಟ್ಟದ ಆಹಾರ ಕಂಡುಬಂದಲ್ಲಿ ಅಂತಹ ಉದ್ದಿಮೆಗಳಿಗೆ ದಂಡದ ಜೊತೆಗೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ಸುರಕ್ಷತೆ ಅಧಿಕಾರಿಗಳು ಹೋಟೆಲ್, ಬೀದಿಬದಿ ಆಹಾರ ಘಟಕಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಆಹಾರದ ಸುರಕ್ಷತೆ ಮತ್ತು ಗುಣಮಟ್ಟವನ್ನು ಪರಿಶೀಲಿಸಿ. ಆಹಾರ ತಯಾರಿಕೆಯಲ್ಲಿ ಯಾವುದನ್ನು ಬಳಸಬೇಕು, ಯಾವುದನ್ನು ಬಳಸಬಾರದು ಎಂಬುದರ ಬಗ್ಗೆ ಸಾರ್ವಜನಿಕರಿಗೆ, ಆಹಾರ ಉದ್ದಿಮೆಗಳಿಗೆ ಜಾಗೃತಿ ಮೂಡಿಸಿ ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ, ಅಂಗನವಾಡಿ ಮತ್ತು ವಸತಿನಿಲಯ, ಹಾಸ್ಟೆಲ್ ಗೆ ಭೇಟಿ ನೀಡಿ ಆಹಾರ ತಯಾರಿಸುವುದರ ಬಗ್ಗೆ, ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ ಅರಿವು ಮೂಡಿಸಿ ಎಂದರು.
ಕೃತಕ ಬಣ್ಣ ನಿಷೇಧ: ಈಗಾಗಲೇ ಸರ್ಕಾರವು ಗೋಬಿ ಹಾಗೂ ಕಬಾಬ್ ತಯಾರಿಕೆಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿದೆ. ಅದಾಗ್ಯೂ ಹೋಟೆಲ್ ಗಳು, ರೆಸ್ಟೋರೆಂಟ್, ಬೀದಿಬದಿ ಘಟಕಗಳು ಕೃತಕ ಬಣ್ಣ ಬಳಸಿ ಆಹಾರ ತಯಾರಿಸುತ್ತಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
ವೆಜ್ ಆಹಾರ, ಚಿಕನ್, ಫಿಶ್ ಇತರೆ ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸಿದರೆ ಏಳು ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು 10 ಲಕ್ಷದವರೆಗೆ ದಂಡವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ನಿಯಮ 59ರಡಿ ವಿಧಿಸಲಾಗುವುದು ಎಂದು ತಿಳಿಸಿದರು.
ಆಹಾರ ಘಟಕಗಳು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ನೋಂದಣಿ ಹಾಗೂ ಪರವಾನಗಿಗಳನ್ನು ಹೆಚ್ಚು ಹೆಚ್ಚು ಮಾಡಿಸಿ, ಆಹಾರದ ಸ್ಯಾಂಪಲ್ ಗಳನ್ನು ಹೆಚ್ಚು ಸಂಗ್ರಹಿಸಿ ವರದಿ ಪಡೆಯಿರಿ. ಆಹಾರ ಉದ್ದಿಮೆಗಳು ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ನಿರ್ದೇಶಿಸಿ ಎಂದರು.
ಬೀದಿಬದಿಗಳಲ್ಲಿ ತಯಾರಿಸುವ ಆಹಾರದ ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ನಿಗಾ ವಹಿಸಿ, ನಿಯಮಿತವಾಗಿ ಸಾರ್ವಜನಿಕರಿಂದ ಬಂದಂತಹ ದೂರಿನನ್ವಯ ಆಹಾರ ಮಾದರಿಗಳನ್ನು ಸಂಗ್ರಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ ಜಿಲ್ಲೆಯಲ್ಲಿ 5326 ಆಹಾರ ಪರವಾನಗಿ ಪಡೆದ ಆಹಾರ ಉದ್ದಿಮೆಗಳು ಇದ್ದು ಎಪ್ರಿಲ್ ಮಾಹೆಯಿಂದ ನವೆಂಬರ್ ಅಂತ್ಯದವರೆಗೆ 209 ಆಹಾರ ಘಟಕಗಳಿಗೆ ಭೇಟಿ ನೀಡಿ 41 ಘಟಕಗಳಿಗೆ ನೋಟಿಸ್ ನೀಡಲಾಗಿದೆ. 22 ಘಟಕಗಳಿಗೆ ದಂಡ ವಿಧಿಸಿ 69000 ರೂ ದಂಡ ಸಂಗ್ರಹಿಸಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಎಚ್., ಜಿಲ್ಲಾ ಕ್ಷಯರೋಗ ನಿಯಂತ್ರಣ ಆಧಿಕಾರಿ ಡಾ.ನಾಗೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮ ಸೇರಿದಂತೆ ಜಿಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಆಹಾರ ಸುರಕ್ಷತೆ ಅಧಿಕಾರಿಗಳು ಉಪಸ್ಥಿತರಿದ್ದರು.