“ಕೆಎಸ್ಆರ್ಟಿಸಿ ಆರೋಗ್ಯ” ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ ಸಂಸ್ಥೆ ಎಂಡಿ ಅನ್ಬುಕುಮಾರ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯದಿಂದ ಇರಬೇಕು ಎಂಬ ಸದುದ್ದೇಶದಿಂದ “ಕೆಎಸ್ಆರ್ಟಿಸಿ ಆರೋಗ್ಯ” ಯೋಜನೆಯನ್ನು ರೂಪಿಸಿದ್ದು, ಮುಖ್ಯಮಂತ್ರಿಗಳು ಇದೇ ಜ.6ರಂದು ಚಾಲನೆ ನೀಡಿದ್ದಾರೆ.
ಇನ್ನು ಈ ಯೋಜನೆಗೆ ಆಸ್ಪತ್ರೆಗಳು ಉತ್ತಮವಾಗಿ ಸ್ಪಂದಿಸಿದ್ದು ನೌಕರರು ಸಂತೋಷದಿಂದ ಸ್ವಾಗತಿಸಿರುವುದು ನಿಗಮಕ್ಕೆ ತೃಪ್ತಿ ತಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸಂತಸ ವ್ಯಕ್ತಪಡಿಸಿ ನೌಕರರಿಗೆ ಪತ್ರ ಬರೆದಿದ್ದಾರೆ.
ಆ ಪತ್ರದಲ್ಲಿ … ಆತ್ಮೀಯ ನೌಕರ ಬಾಂಧವರೇ,
ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ “ಕೆಎಸ್ಆರ್ಟಿಸಿ ಆರೋಗ್ಯ” ಯೋಜನೆಯನ್ನು ರೂಪಿಸಿದ್ದು, ಮುಖ್ಯಮಂತ್ರಿಗಳು 06.01.2025 ರಂದು ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಆಸ್ಪತ್ರೆಗಳು ಉತ್ತಮವಾಗಿ ಸ್ಪಂದಿಸಿದ್ದು ನೌಕರರು ಸಂತೋಷದಿಂದ ಸ್ವಾಗತಿಸಿರುವುದು ನಿಗಮಕ್ಕೆ ತೃಪ್ತಿ ತಂದಿರುತ್ತದೆ.
ಜನವರಿ 11ರವರೆಗೂ 41 ಮಂದಿ ಒಳರೋಗಿಗಳಾಗಿ ಹಾಗೂ 124 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯ ಕಾರ್ಡ್ ಇಲ್ಲದೆಯೂ ನೌಕರರು ತಮ್ಮ PF Number ಹೇಳಿ ಚಿಕಿತ್ಸೆ ವಡೆಯಬಹುದಾಗಿದೆ.
ನಿಗಮದಲ್ಲಿ 33,288 ಅಧಿಕಾರಿ/ಸಿಬ್ಬಂದಿಗಳ ಪೈಕಿ 23,342 ಸಿಬ್ಬಂದಿಗಳಿಗೆ ಈಗಾಗಲೇ ಆರೋಗ್ಯ ಕಾರ್ಡ್ ವಿತರಿಸಲಾಗಿದ್ದು, ಉಳಿದ 9,946 ಸಿಬ್ಬಂದಿಗಳಿಗೆ ನಾಳೆ 12.01.2025 ರೊಳಗಾಗಿ ವಿತರಿಸಲಾಗುವುದು.
ಚಿಕಿತ್ಸಾ ವೆಚ್ಚವನ್ನು 30 ದಿನದೊಳಗಾಗಿ ಆಸ್ಪತ್ರೆಗಳಿಗೆ ಪಾವತಿಸಲಾಗುವುದೆಂದು ತಿಳಿಸಲಾಗಿತ್ತು. ಆದರೆ, ಎಲ್ಲ ಬಿಲ್ಲು/ ದಾಖಲೆಗಳು ಸರಿಯಾಗಿ ನಿಗದಿತ ಸಮಯದಲ್ಲಿ ಒದಗಿಸಿದ್ದಲ್ಲಿ 48 ಗಂಟೆಯೊಳಗೆ ಪಾವತಿಸಲು ಕ್ರಮ ವಹಿಸಲಾಗುವುದು. ಅದರಂತೆ ಈಗಾಗಲೇ 8 ಪ್ರಕರಣಗಳಿಗೆ 48 ಗಂಟೆಯೊಳಗೆ ಚಿಕಿತ್ಸಾ ವೆಚ್ಚ ಪಾವತಿಸಲಾಗಿದೆ.
ಮುಂದುವರಿದು, ಈ ಯೋಜನೆಯಲ್ಲಿ ಚಿಕಿತ್ಸಾ ವೆಚ್ಚವನ್ನು CGHS ದರದಂತೆ ಪಾವತಿಸಲಾಗುವುದೆಂದು ತಿಳಿಸಿದ್ದು, CGHS ದರಪಟ್ಟಿಯಲ್ಲಿ ಇಲ್ಲದ ವಸ್ತುಗಳಾದ Consumables/ Non Admissible items ಗಳಿಗೆ ನೌಕರರೇ ಪಾವತಿಸುವಂತೆ ಈ ಮೊದಲು ತಿಳಿಸಲಾಗಿತ್ತು.
ಆದರೆ ಕೆಲವೊಂದು ವಸ್ತುಗಳು ಚಿಕಿತ್ಸೆಯ ಭಾಗವಾಗಿದ್ದು ಅವುಗಳನ್ನು ಹಾಗೂ ಅಲಂಕಾರಿಕ ವಸ್ತುಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ವಸ್ತುಗಳಿಗೆ CGHS ದರ ಪಟ್ಟಿಯಲ್ಲಿ ಒಳಗೊಂಡಿಲ್ಲವಾದರೂ ಸಹ (Consumables/ Non Admissible ವಸ್ತುಗಳ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ) ನೌಕರರಿಗೆ ಆರ್ಥಿಕ ಹೊರೆಯಾಗಬಾರದೆಂಬ ಆಶಯದಿಂದ ನಿಗಮದ ವತಿಯಿಂದ ಪಾವತಿಸಲು ತೀರ್ಮಾನಿಸಲಾಗಿದೆ.
ಶುಭಾಶಯಗಳೊಂದಿಗೆ
(ವಿ. ಅನ್ನುಕುಮಾರ್ ಭಾಆಸೇ..)
ವ್ಯವಸ್ಥಾಪಕ ನಿರ್ದೇಶಕರು ಎಂದು ಪತ್ರ ಬರೆಯುವ ಮೂಲಕ ಎಲ್ಲ ನೌಕರರೊಂದಿಗೂ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಯಾವ ವಸ್ತುಗಳನ್ನು ನೌಕರರು ಖರೀದಿಸಬೇಕು ಯಾವುದನ್ನು ಖರೀದಿಸ ಬಾರದು ಎಂಬುದರ ಮಾಹಿತಿಯನ್ನು ಕೊಟ್ಟಿದ್ದಾರೆ. ಈ ಪಿಡಿಎಫ್ ನಲ್ಲಿ ನೋಡಿ: KSRTC Arogya – MD Sir Letter.