ನ್ಯೂಡೆಲ್ಲಿ: ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಪಿಎಸ್-95 ರಾಷ್ಟ್ರೀಯ ಹೋರಾಟ ಸಮಿತಿಯ ನಿಯೋಗದೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ.
ಆ ಸಭೆಯಲ್ಲಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರು ಕನಿಷ್ಠ ಪಿಂಚಣಿ 7500 ರೂಪಾಯೊಯನ್ನು ಮಾಸಿಕ ಮತ್ತು ತುಟ್ಟಿಭತ್ಯೆ, ಸಂಗಾತಿಗೆ ಉಚಿತ ವೈದ್ಯಕೀಯ ಸೌಲಭ್ಯ ಮತ್ತು ಹೆಚ್ಚಿನ ಪಿಂಚಣಿಯಲ್ಲಿನ ನ್ಯೂನತೆಗಳನ್ನು ನಿವಾರಿಸಲು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ತಮ್ಮ ಪರವಾಗಿ ಪ್ರಸ್ತುತಪಡಿಸಿದರು.
ಅಲ್ಲದೆ ದೇಶದ 78 ಲಕ್ಷ ಇಪಿಎಸ್-95 ಪಿಂಚಣಿದಾರರ ಸ್ಥಿತಿಗತಿಗಳ ಬಗ್ಗೆ ಗಮನಹರಿಸುವ ಮೂಲಕ ಶೀಘ್ರವಾಗಿ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.
ಈ ವಿಷಯದ ಬಗ್ಗೆ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ, ನಮ್ಮ ಮನವಿಯ ಮೇರೆಗೆ ನೀವು ದೆಹಲಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸಿರುವುದರಿಂದ ಈ ಸಮಸ್ಯೆಯನ್ನು ಪರಿಹರಿಸಲು ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಪಿಂಚಣಿದಾರರ ಹಿತದೃಷ್ಟಿಯಿಂದ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಯಾರು ಧೃತಿಗೆಡಬೇಡಿ ಎಂದು ಪಿಂಚಣಿದಾರರಿಗೆ ಧೈರ್ಯ ತುಂಬಿದರು.
ಈ ವೇಳೆ ಕೇಂದ್ರ ಭವಿಷ್ಯ ನಿಧಿ ಆಯುಕ್ತ ರಮೇಶ್ ಕೃಷ್ಣಮೂರ್ತಿ, ಜಂಟಿ ಕಾರ್ಮಿಕ ಕಾರ್ಯದರ್ಶಿ ಅಲೋಕ್ ಮಿಶ್ರಾ, ಹೆಚ್ಚುವರಿ ಸಿಪಿಎಫ್‌ಸಿ ಚಂದ್ರಮೌಳಿ ಚಕ್ರವರ್ತಿ, ಶ್ರೀಮತಿ ಅಪರಾಜಿತಾ ಜಗ್ಗಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಸಿಂಗ್ ರಾಜಾವತ್, ರಾಷ್ಟ್ರೀಯ ಮುಖ್ಯ ಸಲಹೆಗಾರ ಡಾ. ಪಿ.ಎನ್.ಪಾಟೀಲ್, ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದ, ರಾಷ್ಟ್ರೀಯ ಕಾರ್ಯದರ್ಶಿ ರಾಜೀವ್ ಭಟ್ನಾಗರ್ ಕೂಡ ಪಿಂಚಣಿದಾರರ ಪರ ವಾದ ಮಂಡಿಸಿ ಅಗತ್ಯ ನಮೂನೆಗಳನ್ನು ಕಾರ್ಮಿಕ ಸಚಿವರಿಗೆ ಹಸ್ತಾಂತರಿಸಿದರು.