ಲಾಹೋರ್: ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಪಾಕ್ ತಂಡದಿಂದ ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಹ್ಯಾರಿಸ್ ಸೊಹೇಲ್ ಹಿಂದೆ ಸರಿದಿದ್ದಾರೆ.
ಕೊರೊನಾ ಸೋಂಕು ಆತಂಕದ ಕಾರಣ ನೀಡಿ ಅವರು ಹಿಂದೆ ಸರಿದಿದ್ದು, ಈ ಮೂಲಕ ಆಟವಾಡಲು ಹಿಂದೆ ಸರಿದ ಮೊದಲ ಆಟಗಾರ ಎನಿಸಿದ್ದಾರೆ.
ಪ್ರಮುಖ ವೇಗದ ಬೌಲರ್ ಮಹಮ್ಮದ್ ಅಮೀರ್ ಕೂಡ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದಾರೆ ಎಂದು ಪಾಕ್ ಕ್ರಿಕೆಟ್ ಮಂಡಳಿ ವಕ್ತಾರರು ತಿಳಿಸಿದ್ದಾರೆ. ಅಮೀರ್ ಅವರ ಮನೆಗೆ ಆಗಸ್ಟ್‌ನಲ್ಲಿ ಎರಡನೇ ಅತಿಥಿ ಆಗಮನವಾಗುವ ನಿರೀಕ್ಷೆಯಲ್ಲಿರುವುದರಿಂದ ತಮ್ಮ ಗರ್ಭಿಣಿ ಪತ್ನಿ ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಈ ಕಾರಣದಿಂದ ಪಂದ್ಯದಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆಮೀರ್ ಟೆಸ್ಟ್ ಕ್ರಿಕೆಟ್ ನಿಂದ ಕಳೆದ ವರ್ಷ ನಿವೃತ್ತಿ ಘೋಷಿಸಿದ್ದು ಟ್ವೆಂಟಿ-20 ಸರಣಿಯಲ್ಲಿ ಆಡಬೇಕಿತ್ತು. ಪಾಕಿಸ್ತಾನ ತಂಡವು ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಎದುರು ನಡೆಯಲಿರುವ ತಲಾ ಮೂರು ಪಂದ್ಯಗಳ ಟೆಸ್ಟ್ ಹಾಗೂ ಟ್ವೆಂಟಿ -20 ಸರಣಿ ಆಡಲಿದ್ದು 28 ಆಟಗಾರರು ಹಾಗೂ 14 ನೆರವು ಸಿಬ್ಬಂದಿಯನ್ನು ಕಳುಹಿಸಲಿದೆ.
ಈ ಮೊದಲೇ ವಿಶ್ವ ಮಾರಿ ಕೊರೊನಾ ಪ್ರಕರಣವು ಏರುಗತಿಯಲ್ಲಿ ಸಾಗುತ್ತಿರುವ ಕಾರಣ ಪಾಕ್ ತಂಡವು ತನ್ನ ತರಬೇತಿ ಶಿಬಿರವನ್ನು ರದ್ದುಗೊಳಿಸಿತ್ತು. ವೆಸ್ಟ್ ಇಂಡೀಸ್ ತಂಡದ ಮೂವರು ಆಟಗಾರರಾದ ಡ್ಯಾರೆನ್ ಬ್ರೇವೋ, ಸಿಮ್ರಾನ್ ಹೆಟ್ಮೇಯರ್ ಮತ್ತು ಕಿಮೋ ಪಾಲ್ ಅವರು ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯುವುದಾಗಿ ಕಳೆದ ತಿಂಗಳು ಪ್ರಕಟಿಸಿದ್ದರು. ವೆಸ್ಟ್ ಇಂಡೀಸ್ ಈಗಾಗಲೇ ಇಂಗ್ಲೆಂಡ್ ತಲುಪಿದ್ದು ಜುಲೈ 8 ರಿಂದ ಸೌತಾಂಪ್ಟನ್‌ನಲ್ಲಿ ಮೊದಲ ಟೆಸ್ಟ್ ಆಡಲಿದೆ.