ಕೊರೊನಾ ಹಿನ್ನೆಲೆ ಬಿಎಲ್‌ಒಗಳ ಮೂಲಕ ಮನೆ ಮನೆ ತಪಾಸಣೆ
ಕೋವಿಡ್-19 ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಹೇಳಿಕೆ
ಉಡುಪಿ: ಜಿಲ್ಲೆಯಲ್ಲಿನ ಪ್ರತಿ ಮನೆಗೆ ಭೇಟಿ ನೀಡಿ, ಶೀತ ಜ್ವರ ಇರುವವರ ವಿವರಗಳನ್ನು ಬಿಎಲ್‌ಒಗಳ ಮೂಲಕ ಸಂಗ್ರಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಆಯೋಜಿಸಿದ್ದ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ಪ್ರಕರಣ ಇಲ್ಲವಾಗಿದ್ದು, ಆದರೆ ಮುಂಜಾಗ್ರತೆಯಾಗಿ ಜಿಲ್ಲೆಯಾದ್ಯಂತ ಶೀತ ಜ್ವರ ಇರುವವರ ಕುರಿತು ಮನೆ ಮನೆಗಳ ವ್ಯಾಪಕ ತಪಾಸಣೆ ನಡೆಸುವಂತೆ ಸೂಚಿಸಿದ ಮಹೇಶ್ವರ ರಾವ್, ಈ ಕುರಿತಂತೆ ಜಿಲ್ಲೆಯ ಎಲ್ಲಾ ಬಿಎಲ್‌ಒಗಳನ್ನು ಬಳಸಿಕೊಳ್ಳುವಂತೆ ಹಾಗೂ ತಪಾಸಣೆ ನಡೆಸುವ ಕುರಿತಂತೆ ಅವರಿಗೆ ಅಗತ್ಯ ತರಬೇತಿ ನೀಡುವಂತೆ ಹಾಗೂ ಮಾಹಿತಿ ದಾಖಲಿಸಲು ಅಗತ್ಯ ನಮೂನೆಯನ್ನು ಸಿದ್ದಪಡಿಸಿ ನೀಡಿ, ಮುಂದಿನ 3 ದಿನದಲ್ಲಿ ಎಲ್ಲಾ ಬಿ.ಎಲ್.ಓ ಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಮುಗಿಸುವವಂತೆ ಸೂಚಿಸಿದರು.
ಜಿಲ್ಲೆಯ ಜನತೆ ತಮಗೆ ತೀವ್ರತರ ಜ್ವರ ಮತ್ತು ಶೀತ , ಉಸಿರಾಟದ ತೊಂದರೆಯಿದ್ದಲ್ಲಿ ಸ್ವಯಂ ಪ್ರೇರಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅಗತ್ಯ ಚಿಕಿತ್ಸೆ ಪಡೆಯಬೇಕು , ಇದರಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸಮಾಜದ ಇತರೆ ವ್ಯಕ್ತಿಗಳ ಆರೋಗ್ಯವನ್ನು ರಕ್ಷಿಸಲು ಸಾಧ್ಯವಾಗಲಿದೆ ಎಂದರು.
ಉಡುಪಿಗೆ ಹೊರ ಜಿಲ್ಲೆಯಿಂದ ಪಾಸ್ ಪಡೆದು ಬರುವವರನ್ನು ಹೊಂ ಕ್ವಾರಂಟೈನ್ ನಲ್ಲಿ ಮತ್ತು ಅನಧಿಕೃತವಾಗಿ ಬರುವವರನ್ನು ಪೊಲೀಸ್ ಕ್ವಾರಂಟೈನ್ ನಲ್ಲಿಡಲಾಗುತ್ತಿದೆ, ಉತ್ತರ ಕನ್ನಡ ಜಿಲ್ಲೆಯಿಂದ ಮಣಿಪಾಲದಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಯಾವುದೇ ನಿರ್ಬಂಧ ಇಲ್ಲ, ಕಳೆದ 28 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ , ಜಿಲ್ಲೆಯಲ್ಲಿ ವಿವಿಧ ಶೆಲ್ಟರ್ ರೂಂ ನಲ್ಲಿದ 560 ವಲಸೆ ಕಾಮಿಕರನ್ನು ಶನಿವಾರ ಅವರ ಸ್ವಂತ ಸ್ಥಳಗಳಿಗೆ ಕಳುಹಿಸಲಾಗಿದೆ, ಉಳಿದವರನ್ನು ಸಹ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗಿನ ಕೊರೋನಾ ಪ್ರಕರಣUಳು, ಶಂಕಿತರ ತಪಾಸಣೆ ಮುಂತಾದ ಕುರಿತು ಸಮಗ್ರ ಮಾಹಿತಿಯನ್ನು , ಜಿಲ್ಲಾ ಕೊರೋನಾ ನಿಯಂತ್ರಣದ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ವಿವರಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)