ನೈಜೀರಿಯಾ: ಶಾಲೆಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾಗಲೇ ಎರಡು ಅಂತಸ್ತಿನ ಶಾಲೆ ಕಟ್ಟಡ ಕುಸಿದು ಬಿದ್ದ ಪರಿಣಾಮ 22 ವಿದ್ಯಾರ್ಥಿಗಳು ಮೃತಪಟ್ಟಿದ್ದು, ಅವಶೇಷಗಳಡಿ 100ಕ್ಕೂ ಹೆಚ್ಚು ಮಕ್ಕಳು ಸಿಲುಕಿಕೊಂಡಿರುವ ಘಟನೆ ಉತ್ತರ-ಮಧ್ಯ ನೈಜೀರಿಯಾದಲ್ಲಿ ನಡೆದಿದೆ.
ಉತ್ತರ-ಮಧ್ಯ ನೈಜೀರಿಯಾದಲ್ಲಿರುವ ಬುಸಾ ಬುಜಿ ಸಮುದಾಯದ ಸೇಂಟ್ಸ್ ಅಕಾಡೆಮಿ ಶಾಲೆಯೇ ಕುಸಿದು ಬಿದ್ದಿರುವುದು. ಈ ದುರ್ಘಟನೆಯಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗಾಗಿ ರಕ್ಷಣಾ ತಂಡ ಶೋಧ ಕಾರ್ಯ ನಡೆಸುತ್ತಿದ್ದು, ಹಲವಾರು ಮಕ್ಕಳನ್ನು ಹೊರತಂದಿದ್ದಾರೆ.
ಇನ್ನು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಕಟ್ಟಡ ನೆಲಕ್ಕುರುಳಿದೆ. ಕಟ್ಟಡ ಕುಸಿದ ಪರಿಣಾಮ 154 ವಿದ್ಯಾರ್ಥಿಗಳು ಅವಶೇಷದಡಿ ಸಿಲುಕ್ಕಿದ್ದರು. ವರಲ್ಲಿ 132 ಮಂದಿಯನ್ನು ರಕ್ಷಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಕುಸಿದ ಕಟ್ಟಡದಡಿ ಸಿಲುಕಿ 22 ವಿದ್ಯಾರ್ಥಿಗಳು ಅಸುನೀಗಿದ್ದಾರೆ. ಇದಕ್ಕೆಲ್ಲ ಶಾಲೆಯ ನಿರ್ಮಾಣ ದುರ್ಬಲವಾಗಿದ್ದು, ನದಿ ಬದಿಯಲ್ಲಿ ಶಾಲೆಯನ್ನು ನಿರ್ಮಿಸಲಾಗಿದೆ. ಈ ಕಾರಣಕ್ಕೆ ಶಾಲೆ ಕುಸಿದು ಬಿದ್ದಿದೆ. ಇಂತಹ ಶಾಲೆಗಳು ನೈಜೀರಿಯಾದಲ್ಲಿ ಹಲವಾರಿದ್ದು, ಶೀಘ್ರವೇ ಮುಚ್ಚಬೇಕು ಎಂಬ ಒತ್ತಾಯ ಅಲ್ಲಿನ ಪ್ರಜೆಗಳಿಂದ ಕೇಳಿ ಬರುತ್ತಿದೆ.