ಜಿಲ್ಲೆಯಲ್ಲಿ ನಾಳೆಯಿಂದ ಪೌತಿ ಖಾತೆ ವಿಶೇಷ ಆಂದೋಲನ: ಸದುಪಯೋಗ ಪಡಿಸಿಕೊಳ್ಳಲು ರೈತರಿಗೆ ಜಿಲ್ಲಾಧಿಕಾರಿ ಕರೆ
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕು ವ್ಯಾಪ್ತಿಯ ರೈತ ಬಾಂಧವರಿಗೆ ಈ ಮೂಲಕ ತಿಳಿಸುವುದೇನೆಂದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 50-60 ವರ್ಷಗಳಿಂದಲೂ, ಹಿಡುವಳಿ ಜಮೀನುಗಳ ಖಾತೆದಾರರು ನಿಧನ ಹೊಂದಿದ್ದರೂ ಸಹ ವಾರಸುದಾರರಿಗೆ ಖಾತೆಯಾಗದೇ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಈ ಬಗ್ಗೆ ವಿಶೇಷ ಆಂದೋಲನದ ರೀತಿಯಲ್ಲಿ ಬಾಕಿ ಇರುವ ಎಲ್ಲ ಪೌತಿ ಖಾತೆ ಪ್ರಕರಣಗಳನ್ನು ವಿಲೇವಾರಿ ಮಾಡಲು ಜಿಲ್ಲಾಡಳಿತದಿಂದ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಪೌತಿ ಖಾತೆಯಾಗದೆ ಇರುವ ಹಕ್ಕುದಾರರು ಸರ್ಕಾರದ ಯಾವುದೇ ಯೋಜನೆಗಳನ್ನು ರೈತರು ಪಡೆಯಲು ಸಾಧ್ಯವಾಗದೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.
ಸರ್ಕಾರದ ಮಹತ್ವ ಯೋಜನೆಗಳಾದ ಪಿ.ಎಂ.ಕಿಸಾನ್ ಯೋಜನೆ, ಬರ/ಅತಿವೃಷ್ಟಿ ಪರಿಹಾರ ಹಾಗೂ ಇನ್ನುಳಿದ ಸರ್ಕಾರದ ಯಾವುದೇ ಯೋಜನೆಗಳ ಸವಲತ್ತುಗಳನ್ನು ಫವತಿ ಖಾತೆ ಬದಲಾವಣೆಯಾಗದೆ ಯಾವುದೇ ಪರಿಹಾರವನ್ನು ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಪ್ರತಿ ನಾಡಕಚೇರಿ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ಪೌತಿ ವಾರಸು ಖಾತೆ ಆಂದೋಲನ ಕಾರ್ಯಕ್ರಮವನ್ನು 2024 ರ ಜನವರಿ 05 ರಿಂದ ಫೆಬ್ರವರಿ 05 ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಖಾತೆ ಬದಲಾವಣೆಗೆ ಅರ್ಜಿಯೊಂದಿಗೆ ಅರ್ಜಿದಾರರ ಆಧಾರ್ ಕಾರ್ಡ್ (ನೀಡಲು ಒಪ್ಪಿದಲ್ಲಿ), ಗಣಕೀಕೃತ ವಂಶವೃಕ್ಷ, ಮರಣ ಪ್ರಮಾಣ ಪತ್ರ, ಪ್ರಮಾಣ ಪತ್ರ ( affidavit) ಇನ್ನಿತರೆ ದಾಖಲಾತಿಗಳು (ಅಗತ್ಯವಿದ್ದಲ್ಲಿ) ಸಲ್ಲಿಸಬೇಕು.
ರೈತರು ದಾಖಲಾತಿಗಳೊಂದಿಗೆ ಸಂಬಂಧಿಸಿದ ತಹಸೀಲ್ದಾರ್, ಗ್ರೇಡ್-2 ತಹಸೀಲ್ದಾರ್, ಉಪತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಅಥವಾ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ ಕೋರಿದ್ದಾರೆ.