ಡಿ.31ರಂದು ಜಗಜಿತ್ ಸಿಂಗ್ ದಲೈವಾಲರ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಪಂಜಿನ ಪ್ರತಿಭಟನಾ ಮೆರವಣಿಗೆ
ಮೈಸೂರು: ದೆಹಲಿ ಗಡಿಯಲ್ಲಿ ದೇಶದ ರೈತರ ಒಳಿತಿಗಾಗಿ ಉಪವಾಸ ನಡೆಸುತ್ತಿರುವ ಜಗಜಿತ್ ಸಿಂಗ್ ದಲೈವಾಲ ಅವರ ಹೋರಾಟ ಬೆಂಬಲಿಸಿ ರಾಜ್ಯಾದ್ಯಂತ ಡಿ.31ರ ಸಂಜೆ 6 ಗಂಟೆಗೆ ಪಂಜಿನ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ಇಂದು ಪಂಜಾಬ್ ರಾಜ್ಯ ದಲೈವಾಲ ಅವರ ಉಪವಾಸ ಬೆಂಬಲಿಸಿ ಸಂಪೂರ್ಣ ಬಂದ್ ಆಚರಿಸುವ ಸಂಬಂಧ ನಗದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೈತರು ಕೇಂದ್ರ ಸರ್ಕಾರದ ಭಿಕ್ಷೆ ಕೇಳುತ್ತಿಲ್ಲ ನಮ್ಮ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಮಾಡಬೇಕೆಂದು ಕೇಳುತ್ತ ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಗಂಭೀರತೆ ತೋರದ ಕೇಂದ್ರ ಸರ್ಕಾರ, ಯಾರು ಕೇಳದೆ ಇರುವ ಒಂದು ದೇಶ ಒಂದು ಚುನಾವಣೆ. ಒಂದು ದೇಶ ಒಂದು ಜಿಎಸ್ಟಿ. ಒಂದು ದೇಶ ಒಂದು ಪಡಿತರ ಕಾರ್ಡ್ ಜಾರಿಗೆ ತರುತ್ತಿದೆ.
ದೇಶದಲ್ಲಿ ಶೇಕಡ 80ರಷ್ಟು ಇರುವ ರೈತರು ಕೇಂದ್ರ ಸರ್ಕಾರಕ್ಕೆ ಮತ ನೀಡಿದ್ದಾರೆ. ರೈತರು ಕೇಳುತ್ತಿರುವ ಒತ್ತಾಯಕ್ಕೆ ನಿರಾಶಕ್ತಿ ತೋರುತ್ತಿರುವ ಕೇಂದ್ರ ಸರ್ಕಾರ ಯಾಕೆ ಎಂಬುದನ್ನು ಕೇಳಬೇಕು. ಅದಕ್ಕೆ ನಾವು ಆಯ್ಕೆ ಮಾಡಿ ನಿಮ್ಮನ್ನು ಲೋಕಸಭೆ ಕಳುಹಿಸಿದ್ದೇವೆ. ನೀವು ಸಂಸದರಾಗಿ ನಿದ್ರೆ ಮಾಡಬೇಡಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಿರಿ. ಇಲ್ಲದಿದ್ದರೆ ಹಳ್ಳಿಗಳಿಗೆ ಬಂದರೆ ನಿಮ್ಮನ್ನು ಹೊರಗೆ ಇಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ನಾಯಕ ದಲೈವಾಲ ಅವರು 33 ದಿನದಿಂದ ಉಪವಾಸ ಕುಳಿತಿದ್ದಾರೆ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆಯೇ ಎಂದು ಪ್ರಶ್ನೆ ಮಾಡುತ್ತಿದ್ದೇವೆ. ಈಗಾಗಲೇ ಹಳ್ಳಿ ಹಳ್ಳಿಗಳಲ್ಲಿ ಮೇಣದ ಬತ್ತಿ ಉರಿಸಿ ಪ್ರತಿಭಟನೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಧಾನಿಗಳು ವಿದೇಶಗಳಿಗೆ ಹೋಗಿ ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಅಲ್ಲಿ ಹಿತವಚನ ಹೇಳುತ್ತಾರೆ. ಆದರೆ ನಮ್ಮ ಪ್ರಧಾನಿ ಮೋದಿ ಅವರಿಗೆ ದೇಶದ ರೈತರು ನ್ಯಾಯಕ್ಕಾಗಿ ತಿಂಗಳುಗಟ್ಟಲೆ ಉಪವಾಸ ಮಾಡುತ್ತಿದ್ದರು ಕಾಣುತ್ತಿಲ್ಲವೆ ನಮ್ಮೊಂದಿಗೆ ಮಾತುಕತೆ ಮಾಡಲು ಇವರಿಗೆ ಸಮಯವಿಲ್ಲವೇ ಎಂದು ಕಿಡಿಕಾರಿದರು.
ಇನ್ನು 33 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಜಗಜಿತ್ ಸಿಂಗ್ ದಲೈವಾಲ ಅವರನ್ನ ಆಸ್ಪತ್ರೆಗೆ ರವಾನಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದರು ಇನ್ನೂ ಪಾಲಿಸಿಲ್ಲ ಎಂದು ನ್ಯಾಯಾಂಗ ಉಲ್ಲಂಘನೆ ಮೊಕದ್ದಮೆ ದಾಖಲಿಸುವುದಾಗಿ ಪಂಜಾಬ್ ಸರ್ಕಾರಕ್ಕೆ ಎಚ್ಚರಿಸಿದೆ.
ಬೇರೆ ಬೇರೆ ರಾಜ್ಯಗಳ ರೈತರು ಕನೂರಿ ಬಾರ್ಡರ್ಗೇ ಪ್ರತಿನಿತ್ಯ ಸಾವಿರಾರು ಸಂಖ್ಯೆ ರೈತರು ಜಮಾವಣೆ ಆಗುತ್ತಿದ್ದಾರೆ. ಕರ್ನಾಟಕ ರೈತರ ತಂಡವು ಸದ್ಯದಲ್ಲಿಯೇ ದೆಹಲಿ ಕಡೆ ಹೋಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಪರಶಿವಮೂರ್ತಿ, ಅಂಬಳೆ ಮಂಜುನಾಥ್, ಸೂರಿ ಇದ್ದರು.