ತುರ್ತಾಗಿ ಅಧಿವೇಶನ ಕರೆದು ನೀರು ಬಿಡಲಾಗದು ಎಂದು ಸುಗ್ರೀವಾಜ್ಞೆ ಹೊರಡಿಸಿ: ಮು.ಚಂದ್ರು ಒತ್ತಾಯ
ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಒಪ್ಪಲು ಸಾಧ್ಯವಿಲ್ಲ. ಕೂಡಲೇ ನೀರು ನಿಲ್ಲಿಸಲು ಸಂಕಷ್ಟ ಸೂತ್ರ ಜಾರಿ ಆಗೋತನಕ ಆದೇಶ ಪಾಲನೆ ಮಾಡಬಾರದು ಎಂದು ಇಂದು ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜತೆಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ನೀರು ನಿರ್ವಹಣಾ ಮಂಡಳಿ ಪ್ರಾಧಿಕಾರ ಸಮಿತಿ ರದ್ದು ಮಾಡಬೇಕು. ಸ್ವಾತಂತ್ರವಾಗಿ ಚುನಾವಣಾ ಆಯೋಗದ ರೀತಿ ರಚನೆಯಾಗಬೇಕು. ಕನ್ನಡಪರ, ರೈತ ಪರ, ಜನಪರ ಹೋರಾಟಗಾರರ ಮೇಲೆ ದಾಖಲಾಗಿರುವ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಯಿತು.
ಮುುಖ್ಯಮಂತ್ರಿ ಚಂದ್ರು ಮಾತನಾಡಿ, ತುರ್ತಾಗಿ ವಿಧಾನಸಭೆ ಅಧಿವೇಶನ ಕರೆಯಿರಿ. ರಾಜ್ಯದಲ್ಲಿ ಬರ ಪರಸ್ಥಿತಿ ಇದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ. ಪರಿಣಾಮ ಏನಾಗಿದ್ದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ. ಎಲ್ಲರನ್ನೂ ಜೈಲಿಗೆ ಹಾಕಲಿ ನೋಡೋಣ ಎಂದರು.
ಈ ಸಂದಿಗ್ದ ಪರಿಸ್ಥಿತಿಗೆ ಕಾರಣರಾದ ಎಲ್ಲರನ್ನೂ ಖಂಡಿಸುತ್ತೇನೆ. ಈವರೆಗೂ ಆಡಳಿತ ನಡೆಸಿರುವ ಕೇಂದ್ರ ಸರ್ಕಾರಗಳು, ರಾಜ್ಯ ಸರ್ಕಾರಗಳು, ನ್ಯಾಯಾಧೀಶರು ಎಲ್ಲರೂ ಈ ಸಮಸ್ಯೆಗೆ ಕಾರಣ ಎಂದು ಹೇಳಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಸಭಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ, ತಮಿಳುನಾಡು, ಪಾಂಡಿಚೆರಿ, ಕೇರಳ ರಾಜ್ಯಗಳ ಪರಿಣಿತರು, ರೈತ ಮುಖಂಡರು, ತಜ್ಞರನ್ನು ಒಳಗೊಂಡ ಸಂವಿಧಾನಬದ್ಧ, ಸ್ವತಂತ್ರ ಸಮಿತಿ ರಚಿಸಿ ಅದಕ್ಕೆ ಅಧಿಕಾರ ಕೊಡಬೇಕು ಎಂದು ಹೇಳಿದರು.
ಮಳೆ ಕಡಿಮೆಯಾದಾಗ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ನೀರು ಬಿಡುವುದು, ಬೆಳೆ ಬೆಳೆಯುವ ಬಗ್ಗೆ ಸಮಿತಿ ನಿರ್ಧಾರ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದು. ಪಕ್ಷಬೇಧ ಮರೆತು ನಾಡಿನ ಹಿತಕ್ಕಾಗಿ ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ಮಾಡಬೇಕು. ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯ ಆದಾಗ, ನಾಡು, ಜಲ, ಗಡಿ ವಿಚಾರದಲ್ಲಿ ರಾಜ್ಯಕ್ಕೆ ಸಂಕಟ ಬಂದಾಗ ನಾವು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದರು.
ಚಿತ್ರರಂಗದವರು ಬೀದಿಗಿಳಿದು ಹೋರಾಟ ಮಾಡಲಿ: ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ತಮಿಳುನಾಡಿನ ರಾಜಕಾರಣಿಗಳು ಅವರ ರಾಜ್ಯಕ್ಕೆ ಬೇಕಾದ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಕರ್ನಾಟಕದ ಹಿತಾಸಕ್ತಿ ಕಾಪಾಡುವ ರಾಜಕೀಯ ನಾಯಕರೇ ಇಂದು ರಾಜ್ಯದಲ್ಲಿ ಇಲ್ಲದಂತಾಗಿದೆ. ಬೆಂಗಳೂರಿಗೆ ಕುಡಿಯಲು 24 ಟಿಎಂಸಿ ನೀರು ಬೇಕು. ಆದರೆ, ಎಲ್ಲಿದೆ ಇಷ್ಟು ನೀರು?. ನಿಮಗೆ ಮೇಕೆದಾಟು ಯೋಜನೆ ಆರಂಭಿಸಲು ಇನ್ನು ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದರು.
ಚಿತ್ರರಂಗದವರು ಕೂಡ ಕಾವೇರಿ ಹೋರಾಟಕ್ಕೆ ಧುಮುಕಬೇಕು. ನಾವು ಹೋರಾಟ ಮಾಡಲು ವೇದಿಕೆ ನಿರ್ಮಾಣ ಮಾಡುತ್ತೇವೆ. ನಮ್ಮ ಜೊತೆ ಕೈಜೋಡಿಸಲಿ. ಬೆಂಗಳೂರಿನ ಜನತೆಗೂ ಮುಂದಿನ ದಿನಗಳಲ್ಲಿ ಎದುರಾಗಲಿರುವ ಸಮಸ್ಯೆ ಕುರಿತು ಅರಿವಾಗಿಲ್ಲ. ಟ್ಯಾಂಕರ್ ಮಾಫಿಯಾ ಬೆಂಗಳೂರಿನಲ್ಲಿ ಬೃಹದಾಕಾರವಾಗಿ ಬೆಳೆದಿದೆ. ಕಾವೇರಿ ನೀರು ಜನರಿಗೆ ಸಿಗದಿರಲು ಇವರೂ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.
ಸಭಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಕುಮಾರ ಸ್ವಾಮಿ, ರೈತ ಮಹಿಳಾ ನಾಯಕಿ ಸುನಂದ ಜಯರಾಮ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.