ನ್ಯೂಡೆಲ್ಲಿ: ರೈತ ಮುಖಂಡ ದಲೈವಾಲ ಜೀವಕ್ಕೆ ಅಪಾಯವಾದರೆ ದೇಶದಲ್ಲಿ ರೈತದಂಗೆ ಆಗಲಿದೆ ಎಂದು ದಕ್ಷಿಣ ಭಾರತ ರಾಜ್ಯಗಳು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಕರ್ನಾಟಕದ ಸಂಚಾಲಕ ಕುರುಬೂರ್ ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು (ಜ.2) ಕನೂರಿ ಬಾರ್ಡರ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ 70ರಷ್ಟು ಜನಸಂಖ್ಯೆಯುಳ್ಳ ರೈತ ಸಮುದಾಯದ ಬೇಡಿಕೆ ಎಂಎಸ್‌ಪಿ ಗ್ಯಾರಂಟಿ ಕಾನೂನು ಈಡೇರಿಸಲು ಸಾಧ್ಯವಾಗದ ಕೇಂದ್ರ ಸರ್ಕಾರ. ಉದ್ಯಮಿಗಳು ಸಾಲ ಮನ್ನಾ ಮಾಡಿ ಎಂದು ಕೇಳದೇ ಇದ್ದರು 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ.
ಇನ್ನು ದೇಶದಲ್ಲಿ ಯಾರೂ ಕೇಳದೆ ಇರುವ ಒಂದು ದೇಶ ಒಂದು ಚುನಾವಣೆ ತರಾತುರಿಯಲ್ಲಿ ಜಾರಿ ಮಾಡಲು ಯಾಕೆ ಚಿಂತೆ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ, ಈವರೆಗೂ 70ರಷ್ಟು ಇರುವ ರೈತರು ವರ್ಷಗಟ್ಟಲೆ ಹೋರಾಟ ಮಾಡಿ ಕೇಳುವ ಕಾನೂನು ಮಾಡಲು ಮಾತ್ರ ಇನ್ನೂ ಮುಂದಾಗಿಲ್ಲ. ಪ್ರಧಾನಿಗಳಿಗೆ ಜಾರಿ ಮಾಡಲು ಏನು ಕಷ್ಟ ಎಂದು ಪ್ರಶ್ನಿಸಿದರು.
ಇವರು ಅಧಿಕಾರಕ್ಕೆ ಬಂದು ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಎಂ ಎಸ್ ಪಿ ಗ್ಯಾರಂಟಿ ಕಾನೂನು ಬಗ್ಗೆ ಮಾತನಾಡುತ್ತಿಲ್ಲ. ರೈತರ ಉತ್ಪನ್ನಗಳಿಗೆ ಜಿಎಸ್‌ಟಿ ಬರೆ ಹಾಕಿರುವುದೇ ಇವರ ಸಾಧನೆ ಎಂದು ಕಿಡಿಕಾರಿದರು.
ಇನ್ನು ರೈತರು ಹೇಡಿಗಳಲ್ಲ. ಸ್ವಾತಂತ್ರ್ಯ ಚಳವಳಿಯ ಮಾದರಿಯ ಚಳವಳಿಯನ್ನು ಪಂಜಾಬ್ ರೈತರು ಮಾಡುತ್ತಿದ್ದಾರೆ. ಇಡೀ ದೇಶದ ರೈತರು ಅವರ ಜತೆ ಬೆಂಗಾವಲಾಗಿದ್ದೇವೆ. ದಲೈವಾಲ ಪ್ರಾಣಕ್ಕೆ ಕುತ್ತು ಬಂದರೆ ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯುತ್ತೇವೆ ಎನ್ನುವ ಎಚ್ಚರಿಕೆ ಇರಲಿ ಎಂದರು.
ನಾವು ತಾಳ್ಮೆಯಿಂದ ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿಗಾಗಿ ದಲೈವಾಲ ಉಪವಾಸ ಸತ್ಯಾಗ್ರಹ ಬೆಂಬಲಿಸುತ್ತಿದ್ದೇವೆ. ಇನ್ನು ಕರ್ನಾಟಕದಲ್ಲಿ ನಿರಂತರವಾಗಿ ಹೋರಾಟ ಮುಂದುವರಿಯುತ್ತದೆ. ಕರ್ನಾಟಕದ ಬೆಂಗಳೂರಿನಲ್ಲಿ 4 ದಿನ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಪಕ್ಷಾತೀತವಾಗಿ ಸಂಸದರ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ಎಚ್ಚರಿಕೆ ನೀಡಿದ್ದೇವೆ.
ರೈಲು ಬಂದ್ ಚಳವಳಿ ಮಾಡಿ ಸಾವಿರಾರು ರೈತರು ಬಂಧನಕ್ಕೆ ಒಳಗಾಗಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಮೇಣದಬತ್ತಿ ಉರಿಸಿ ಪ್ರತಿಭಟನೆ ಮಾಡಿದ್ದೇವೆ. ಕಳೆದ ಡಿ.31ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪಂಜಿನ ಮೆರವಣಿಗೆ ಮಾಡಿದ್ದೇವೆ. ಇನ್ನು ಇದೇ ಜನವರಿ 4ರಂದು ದಲೈವಾಲ ಉಪವಾಸ ನಿರತ ಕನೂರಿ ಬಾರ್ಡರ್‌ನಲ್ಲಿ 10 ಲಕ್ಷ ರೈತರ ಕಿಸಾನ್ ಪಂಚಾಯತ್ ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕದ ರೈತರ ತಂಡ ಕನೋರಿ ಬಾರ್ಡರ್ ಗೆ ಬಂದಿದ್ದೇವೆ ಇನ್ನೂ ಸಾವಿರಾರು ರೈತರು ಇಲ್ಲಿಗೆ ಬರಲು ಕಾತುರರಾಗಿದ್ದಾರೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದರು.