ನ್ಯೂಡೆಲ್ಲಿ: ಭಾರತದ ಮಾಜಿ ಪ್ರಧಾನಿಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಕುಟುಂಬಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮಧ್ಯಾಹ್ನ ನೆರವೇರಿತು.
ಪಂಚಭೂತಗಳಲ್ಲಿ ಲೀನವಾಗುವ ಮೂಲಕ ನವ ಭಾರತ ನಿರ್ಮಾಣದ ಕನಸು ಕಂಡ ಕನಸುಗಾರ ಮನಮೋಹನ್ ಸಿಂಗ್ ನಮಗೆ ಇನ್ನು ನೆನಪು ಮಾತ್ರ. ಡಿಸೆಂಬರ್ 26 ರಂದು ಇಹಲೋಕ ಯಾತ್ರೆ ಮುಗಿಸಿದ ಅವರ ಅಂತ್ಯಕ್ರಿಯೆ ಇಂದು ನಿಗಮ್‌ಬೋಧ್ ಘಾಟ್‌ನಲ್ಲಿ ನಡೆಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಇಲಾಖೆ ಸಚಿವ ರಾಜ್ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕರ್ನಾಟಕದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆ ವೇಳೆ ಭಾಗಿಯಾಗಿದ್ದರು.
ಇಂದು ಬೆಳಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನ: ಇಂದು ಕಾಂಗ್ರೆಸ್ನ ಪ್ರಧಾನ ಕಚೇರಿಗೆ ಮನಮೋಹನ್ ಸಿಂಗ್ ಅವರ ಪಾರ್ಥಿವಶರೀರಕ್ಕೆ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಬೆಳಗ್ಗೆ 10 ಗಂಟೆಯವರೆಗೆ ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ಕಚೇರಿಯಿಂದ ಹೊರಟ ಅಂತಿಮ ಯಾತ್ರೆ ಸುಮಾರು 11.30ಕ್ಕೆ ನಿಗಮ್‌ಬೋಧ್ ಘಾಟ್ ತಲುಪಿತು.
ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆಗೆ ಅನುಕೂಲವಾಗುವಂತೆ ರಿಂಗ್ ರೋಡ್, ನಿಷಾದ್ ರಾಜಮಾರ್ಗ, ಎಸ್ಪಿಎಂ ಮಾರ್ಗದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಕಾಂಗ್ರೆಸ್ ಕಚೇರಿಯಿಂದ ಈ ಮಾರ್ಗದ ಮೂಲಕ ಹೊರಟ ಅಂತಿಮಯಾತ್ರೆ ನಿಗಮ್‌ಬೋಧ್ ಘಾಟ್ಗೆ ಬಂದು ತಲುಪಿತು.
ಸಿಖ್ ಸಂಪ್ರದಾಯದಂತೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆದವು. ಸಕಲ ಸರ್ಕಾರಿ ಗೌರವಗಳೊಂದಿಗೆ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯಿತು. ಸ್ಥಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ವಾದ್ರಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ.ವೇಣುಗೋಪಾಲ್ ಸೇರಿ ಹಲವು ಕಾಂಗ್ರೆಸ್ ನಾಯಕರು ನೆರೆದಿದ್ದು. ಮನಮೋಹನ್ ಸಿಂಗ್ ಅವರಿಗೆ ಅಂತಿಮ ವಿದಾಯ ಹೇಳಿದರು.