NEWSನಮ್ಮಜಿಲ್ಲೆನಮ್ಮರಾಜ್ಯ

ಮೇಲೆ ‘ಸರಳರಾಮಯ್ಯ! ಒಳಗೆ ಐಶಾರಾಮಯ್ಯ!!’ ಹೌದಲ್ಲವೇ: ಸಿಎಂಗೆ ಚಾಟಿ ಬೀಸಿದ ಎಚ್‌ಡಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಿದ್ದರಾಮಯ್ಯ ನವರೇ ನೀವು ಬಡವರ ಬಗ್ಗೆ ಮಾತನಾಡುತ್ತಿರುವುದೇ ಸೋಜಿಗ. ಐಶಾರಾಮಿಯಾದ ನೀವು ಮೇಲೆ ‘ಸರಳರಾಮಯ್ಯ! ಒಳಗೆ ಐಶಾರಾಮಯ್ಯ!!’ ಹೌದಲ್ಲವೇ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕುಟುಕಿದ್ದಾರೆ.

ಈ ಬಗ್ಗೆ ಎಕ್ಸ್‌ ಮಾಡಿರುವ ಅವರು, ನಾನು ಹೇಳಿದ್ದನ್ನೇಕೆ ತಿರುಚುತ್ತೀರಿ? ಗ್ಯಾರಂಟಿಗಳ ಬಗ್ಗೆ ನನಗೇಕೆ ಹೊಟ್ಟೆಯುರಿ? ನಾನು ಹೇಳಿದ್ದೇನು? ನೀವು ವಕ್ರೀಕರಿಸುತ್ತಿರುವುದೇನು? ಕಾಸು ಕೊಟ್ಟು ಸಮೀಕ್ಷೆ ಮಾಡಿಸಿಕೊಂಡ ಹಾಗಲ್ಲ ಇದು. 5 ಗ್ಯಾರಂಟಿ ಕೊಟ್ಟಿದ್ದೀರಿ, ಸರಿ. ಅದನ್ನು ನೆಟ್ಟಗೆ ಕೊಡಲು ವಿಫಲರಾಗಿದ್ದೀರಿ ಎಂದಿದ್ದೇನೆ. ಇಲ್ಲವೆಂದರೆ ಹೇಳಿ, ಬಹಿರಂಗ ಚರ್ಚೆಗೇ ಬರುತ್ತೇನೆ. ಎಲ್ಲಿಗೆ ಬರಲಿ ಐಶಾರಾಮಯ್ಯ ಎಂದು ಹ್ಯಾಸ್‌ಟ್ಯಾಗ್‌ ಮಾಡಿದ್ದಾರೆ.

ಕೋಟ್ಯಂತರ ಫಲಾನುಭವಿಗಳು ಸಂಭ್ರಮಿಸುತ್ತಿದ್ದಾರೆಯೇ? ಸತ್ಯ ಹೇಳಿ. ಮಾಧ್ಯಮಗಳು ಸುಳ್ಳು ಹೇಳುತ್ತಿವೆಯೇ? ಪೊಳ್ಳು ಬರೆಯುತ್ತಿವೆಯೇ? ನಿಮ್ಮ ಪ್ರಕಾರ ಮಾಧ್ಯಮಗಳಿಗೆ, ಪ್ರತಿಪಕ್ಷಗಳಿಗೆ ಸುಳ್ಳು ಹೇಳುವುದೇ ಕೆಲಸವೇ? ಹಿಂದೆ ನೀವು ಮಾಡಿದ್ದೂ ಇದೇನಾ? ನಿಮ್ಮ ‘ಸಮಾಜವಾದಿ ಆತ್ಮಸಾಕ್ಷಿ’ ಹೀಗಂತ ಹೇಳುತ್ತಿದೆಯಾ? ಗ್ಯಾರಂಟಿಗಳನ್ನು ಕಾಂಗ್ರೆಸ್ ಮತದಾರರಿಗಷ್ಟೇ ತಂದಿದ್ದೀರಿ ಎಂದು ನಾನು ಹೇಳಿದ್ದೇನೆಯೇ? ಬಹುಶಃ ನಿಮಗೆ ಅಂಥ ಮನಃಸ್ಥಿತಿ ಇದ್ದರೂ ಇದ್ದೀತು ಎಂದು ಕೆದಕಿದ್ದಾರೆ.

ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೇನೆ. ಹಾಗಾದರೆ, ಮಾಧ್ಯಮಗಳಿಗೆ ಸತ್ಯ ತಿಳಿಸುವುದೇ ಅಪರಾಧವೇ? ನಿಮ್ಮ ದರ್ಬಾರಿನಲ್ಲಿ ಮಾಧ್ಯಮಗೋಷ್ಠಿಯೂ ಮಹಾಪಾಪವೇ? ನಿಮ್ಮ ‘ಸಿದ್ದಾಂತರಾಳ’ ಹೀಗೆಂದು ಅಪ್ಪಣೆ ಕೊಟ್ಟಿದೆಯಾ? ಹಳ್ಳಿಗಳಿಗೆ ಹೋಗಿದ್ದೇನೆ, ಫಲಾನುಭವಿಗಳನ್ನು ಮಾತನಾಡಿಸಿದ್ದೇನೆ. ಸತ್ಯ ಹೇಳಿದ್ದೇನೆ. ಬನ್ನಿ, ನಿಮಗೂ ಸತ್ಯದರ್ಶನ ಮಾಡಿಸುತ್ತೇನೆ ಎಂದು ಕರೆದಿದ್ದಾರೆ.

ಐಶಾರಾಮಯ್ಯನವರೇ, ನನ್ನ ದನಿ ಬಡವರ ಪರ. ನಿಮ್ಮಂತೆ ಯಾರ ಮುಲಾಜಿಗೂ ಬಿದ್ದವನಲ್ಲ ನಾನು. ರಾಜ್ಯಕ್ಕೆ ರಾಜ್ಯವೇ ಬರದ ಬೆಂಕಿಯಲ್ಲಿ ಬೇಯುತ್ತಿದೆ. ರೈತಸಂಕುಲ ನರಕದಲ್ಲಿದೆ. ಅವರ ಸಾಲಮನ್ನಾ ಮಾಡಿ. #YstTax, #SstTax ಕಲೆಕ್ಷನ್ ಬದಿಗಿಟ್ಟು ರೈತರ ಪರ ನಿಲ್ಲಿ. ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದ್ದೀರಲ್ಲ, ರೈತರ ಬದುಕಿಗೆ ಗ್ಯಾರಂಟಿ ಕೊಡಿ. ನಾನು ಸಾಲಮನ್ನಾ ಮಾಡಿ ತೋರಿಸಿದ್ದೇನೆ, ಈಗ ನೀವು ಮಾಡಿ. ಬರೀ ಬಾಯಿ ಮಾತೇಕೆ? ಇದೇ ನನ್ನ ಸವಾಲು ಎಂದು ಹೇಳಿದ್ದಾರೆ.

ಇದ್ದಿದ್ದನ್ನು ಇದ್ದಂತೆ ಹೇಳಿದರೆ, ಅದನ್ನೇ ವಾಗ್ದಾಳಿ ಎಂದು ಅನುಕಂಪ ಗಿಟ್ಟಿಸಿಕೊಳ್ಳುವ ನಿಮ್ಮ ಬಗ್ಗೆ ಸಹಾನೂಭೂತಿ ಇದೆ. ಶಾಂತಿ, ದ್ವೇಷಾಸೂಯೆ, ಹತಾಶೆ ಬಗ್ಗೆ ದಯವಿಟ್ಟು ಮಾತನಾಡಬೇಡಿ. ನಿಮ್ಮ ಸಕಲಸದ್ಗುಣಗಳ ಬಗ್ಗೆ ನನಗಿಂತ ಮಲ್ಲಿಕಾರ್ಜುನ ಖರ್ಗೆ ಅವರೇ ಹೆಚ್ಚು ಬಲ್ಲರು. ಇನ್ನು; ಚುನಾವಣೆ ಸೋಲು ಎಂದಿದ್ದೀರಿ? ಇದು ನನಗೂ ಹೊಸದಲ್ಲ, ನಿಮಗೂ ಹೊಸದಲ್ಲ. ನಿಮ್ಮ ಹಳಹಳಿಕೆ ಅರ್ಥ ಮಾಡಿಕೊಳ್ಳಬಲ್ಲೆ. ವೈಫಲ್ಯಗಳನ್ನೇ ವಕ್ರೀಕರಿಸಿ ಅನುಕಂಪ ಗಿಟ್ಟಿಸುವ ಹಳೆಯ ಚಾಳಿ ಬಿಡಿ ಎಂದು ಛೇಡಿಸಿದ್ದಾರೆ.

ನನ್ನ ಹೆಸರು ಕೇಳಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೇ ಭಯ ಅನ್ನುತ್ತೀರಿ. ಪ್ರಧಾನಿ ಬಗ್ಗೆ ಮುಖ್ಯಮಂತ್ರಿ ಆಡುವ ಮಾತೇ ಇದು. ‘ಸಾಸಿವೆ ಕಾಳಿನಷ್ಟು ಶಿಷ್ಟಾಚಾರ ಗೊತ್ತಿಲ್ಲ. ಸಾಲುಸಾಲು ಸಮ್ಮಾನ ಬೇಕು’ ಎಂದನಂತೆ ಒಬ್ಬ. ಹಾಗಿದೆ ನಿಮ್ಮ ಧಿಮಾಕು. ಧಮ್ಮು, ತಾಕತ್ತು, ಗೈರತ್ತಿನಿಂದ ಕೆಲಸ ಆಗಲ್ಲ ಮುಖ್ಯಮಂತ್ರಿಗಳೇ? ಐದು ವರ್ಷ ಸಿಎಂ ಆಗಿದ್ದ ನಿಮಗೆ ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲವೇ? ಕಾವೇರಿ ವಿಷಯದಲ್ಲಿಯೇ ನಿಮ್ಮ ದಮ್ಮು, ತಾಕತ್ತು ಮೂರಾಬಟ್ಟೆ ಆಯಿತಲ್ಲ. ತಮಿಳುನಾಡಿಗೆ ಈಗಲೂ ನೀರು ಹರಿಯುತ್ತಿದೆಯಲ್ಲ!! ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮಹಾದೇವಪ್ಪ ನಿಂಗೂ ಕತ್ತಲು ಫ್ರೀ!: “ಮಹಾದೇವಪ್ಪ ನಿಂಗೂ ಕತ್ತಲು ಫ್ರೀ! ನಂಗೂ ಕತ್ತಲು ಫ್ರೀ!! ಕಾಕಾ ಪಾಟೀಲ್ ನಿಂಗೂ ಕತ್ತಲು ಫ್ರೀ!!” ಇದು ನಿಮ್ಮ ಗ್ಯಾರಂಟಿಗಳ ಸ್ಥಿತಿ. ಸುಳ್ಳೇಕೆ ಹೇಳುತ್ತೀರಿ? ಆ ಪದವಿಗಾದರೂ ಗೌರವ ಬೇಡವೇ? ಸೀಟಿನಲ್ಲಿ ಕೂತು ಸುಳ್ಳು ಹೇಳದಿರಿ. ಉಚಿತ, ಖಚಿತ ಎಂದವರು ನೀವು. ಇವು ಅಗ್ಗದ ಯೋಜನೆಗಳು ಎಂದು ನಾನು ಹೇಳಿದ್ದೂ ಹೌದು. ನಾನೇ ಏಕೆ, ನಿಮ್ಮ ಸಂಪುಟದ ಹಾಲಿ ಕ್ಯಾಬಿನೇಟ್ ಮಂತ್ರಿಯೊಬ್ಬರೇ, “ಎಲೆಕ್ಷನ್ ಗೆಲ್ಲಬೇಕಾದರೆ ಗ್ಯಾರಂಟಿಗಳಂಥ ಚೀಫ್ ಗಿಮಿಕ್, ಟ್ರಿಕ್ಸ್ ಮಾಡಲೇಬೇಕು” ಎಂದು ಹೇಳಿರಲಿಲ್ಲವೇ? ವೈರಲ್ ಆಗಿದ್ದ ಆ ವಿಡಿಯೋ ನಿಮ್ಮ ಮೊಬೈಲಿಗೂ ಬಂದಿರಬೇಕಲ್ಲವೇ?

ದೂರದೃಷ್ಟಿ ಇಲ್ಲದ ಗ್ಯಾರಂಟಿಗಳು ಕರ್ನಾಟಕವನ್ನು ಆರ್ಥಿಕ ಆಪತ್ತಿಗೆ ದೂಡುತ್ತವೆ ಎಂದು ಆರ್ಥಿಕ ಇಲಾಖೆ ಕಳೆದ ಜೂನ್ (1-6-2023) ನಲ್ಲಿಯೇ ಎಚ್ಚರಿಸಿತ್ತು. ಗೃಹಲಕ್ಷ್ಮೀ ಯೋಜನೆ ರಾಜ್ಯವನ್ನು ಆದಾಯ ಕೊರತೆಗೆ ನೂಕಲಿದೆ, ಪ್ರತೀವರ್ಷ ಇಷ್ಟು ಬೃಹತ್ ಮೊತ್ತ ಹೊಂದಿಸುವುದು ಕಷ್ಟ. ರಾಜ್ಯ ದಿವಾಳಿ ಆಗುತ್ತದೆ ಎಂಬ ಎಚ್ಚರಿಕೆಯನ್ನು ಹಣಕಾಸು ಸಚಿವರಾಗಿ ಉಪೇಕ್ಷೆ ಮಾಡಿದ್ದು ನೀವಲ್ಲವೇ? ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಸ್ವತಃ ವಿತ್ತ ಸಚಿವರೇ ಉಲ್ಲಂಘಿಸಿದರೆ ಹೇಗೆ?

ಸೋಲು, ಗೆಲುವು ಜನಾಧೀನ. ಆ ಸತ್ಯ ನನಗೂ ಗೊತ್ತು, ನಿಮಗೂ ಗೊತ್ತು. ಆದರೆ, ಅರೆಬರೆ ಗ್ಯಾರಂಟಿಗಳಿಂದ ಲೋಕಸಭೆ ಗೆಲ್ಲುತ್ತೇವೆ ಎಂದು ಹೊರಟಿದ್ದೀರಿ. ಬನ್ನಿ ಅಖಾಡಕ್ಕೆ. ನಮ್ಮ ಸತ್ಯಕ್ಕೆ ಸೋಲೋ, ನಿಮ್ಮ ಸುಳ್ಳಿಗೆ ಗೆಲುವೋ.. ಎಂದು ನೋಡೋಣ.
‘ಸಾಲದ ಶೂಲ’, ‘ಆರ್ಥಿಕ ದಿವಾಳಿತನ’, ‘ಆರ್ಥಿಕ ಅಸ್ಥಿರತೆ-ಅದಕ್ಷತೆ’, ‘ಪರಾಧೀನ ಬದುಕು’, ‘ಕಮೀಷನ್‌ ಕಾಂಡ’ ; ಇವು ನಿಮ್ಮ ಸರಕಾರ ರಾಜ್ಯಕ್ಕೆ ಕೊಟ್ಟಿರುವ 5 ಹೊಸ ಗ್ಯಾರಂಟಿಗಳು! ಇನ್ನು, ರಾಜ್ಯದ ಭವಿಷ್ಯ, ಪ್ರತಿಷ್ಠೆ ಎಲ್ಲವೂ ದೈವಾಧೀನ ಎಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ