ಮೈಸೂರು: ದೆಹಲಿಯಲ್ಲಿ ದೇಶದ ಅನ್ನದಾತರ ಪರವಾಗಿ ರೈತ ಮುಖಂಡರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಇಂದು (ಡಿ.18) ಮೈಸೂರಿನಲ್ಲಿ ರೈಲು ತಡೆ ನಡೆಸಲು ಮುಂದಾದ ರೈತ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ರೈಲು ತಡೆಗೆ ಮುಂದಾದ ರೈತರನ್ನು ಪೊಲೀಸ್ ಅಧಿಕಾರಿ ಎಸಿಪಿ ಅಶ್ವಥ್ ನಾರಾಯಣ್ ತಡೆದಾಗ ಮಾತಿನ ಚಕಮಕಿ ನಡೆಯಿತು. ರೈತ ಮುಖಂಡ ಕುರುಬೂರು ಶಾಂತಕುಮಾರ್, ಚಳವಳಿ ಮಾಡುವ ಮೊದಲೇ ನಮ್ಮನ್ನು ತಡೆಯುವುದು ಯಾತಕ್ಕಾಗಿ. ಯಾವ ಕಾನೂನಿನಲ್ಲಿ ನಿಮಗೆ ಈ ರೀತಿ ಅವಕಾಶ ಇದೆ ಎಂಬುದನ್ನು ತಿಳಿಸಿ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ಹಾಗೂ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಯಾವುದೇ ಅಧಿಕಾರಿಗಳು ಸರಿಯಾದ ಉತ್ತರ ಕೊಡದೆ ಬಂಧನ ಮಾಡಿ ಪೊಲೀಸ್ ವಾಹನಕ್ಕೆ ಹತ್ತಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ನೇತೃತ್ವದ ಮತ್ತೊಂದು ರೈತರ ತಂಡ ಬಂಬೂ ಬಜಾರ್ ಕಡೆಯಿಂದ ರೈಲ್ವೆ ಹಳಿಗಳ ಮೇಲೆ ಹತ್ತಿ ರೈಲು ತಡೆ ನಡೆಸಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದರು.
ದೇಶದ ರೈತರ ಒತ್ತಾಯವೇನು?: ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಖಾತ್ರಿ ಕಾನೂನು ಜಾರಿಯಾಗಬೇಕು. ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿ ಕಳೆದ 23 ದಿನಗಳಿಂದ ದೆಹಲಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಗಜಿತ್ ಸಿಂಗ್ ಧಲೇವಾಲ ಆರೋಗ್ಯಸ್ಥಿತಿ ದಯಾನೀಯವಾಗಿದೆ.
ಇನ್ನು ಕೇಂದ್ರ ಸರ್ಕಾರ ಕೇವಲ ಮೊಸಳೆ ಕಣ್ಣೀರು ಸುರಿಸಿ ನಾಟಕವಾಡುತ್ತಿದೆ. ಇಂತಹ ವರ್ತನೆ ಖಂಡನೀಯ. ಕೂಡಲೇ ಚಳವಳಿ ನಿರತ ರೈತ ಮುಖಂಡರ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಮೈಸೂರಿನಲ್ಲಿ ನೂರಾರು ರೈತರು ರೈಲು ತಡೆ ಚಳವಳಿ ನಡೆಸಲು ರೈಲು ನಿಲ್ದಾಣದ ಒಳಗೆ ಹೋಗಲು ಮುಂದಾದಾಗ ಪೊಲೀಸರು ತಡೆದರು.
ಈ ವೇಳೆ ಪೊಲೀಸರ ದಬ್ಬಾಳಿಕೆಗೆ ಧಿಕ್ಕಾರ. ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ದಿಕ್ಕಾರ. ರೈತರ ಕಷ್ಟ ನಿಗಿಸಿ ಅನ್ನದ ಋಣ ತೀರಿಸಿ ಎಂದು ಘೋಷಣೆ ಕೂಗುತ್ತಾ ರೈಲ್ವೆ ಮುಖ್ಯ ದ್ವಾರದ ಒಳಗೆ ನುಗ್ಗಲು ಯತ್ನಿಸಿದರು.
ಚಳವಳಿಯ ಮುಖಂಡತ್ವವನ್ನು ವಹಿಸಿದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರಕೆ ರೈತರು ಸತ್ತರೆ ಚಿಂತೆ ಇಲ್ಲ, ಅಂಬಾನಿ ಅದಾನಿ ಬದುಕುಳಿದರೆ ಸಾಕು ಎನ್ನುವಂತಿದೆ. ರೈತರ ಸಾವು ನಿರೀಕ್ಷೆ ಮಾಡುತ್ತಿದೆ. ಅದಕ್ಕಾಗಿಯೇ ಸಮಸ್ಯೆ ಬಗ್ಗೆ ನಿರ್ಲಕ್ಷ ತೋರುತ್ತಿದೆ.
ಇತ್ತ ಜನರಿಂದ ಆಯ್ಕೆಯಾದ ಎಂಪಿಗಳು ರೈತರ ವಿಷಯದಲ್ಲಿ ಎಮ್ಮೆಗಳಂತೆ ವರ್ತಿಸುತ್ತಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ. ಹಳ್ಳಿಗಳಿಗೆ ಬಂದರೆ ಉಗಿಯುವ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇನೆ ಎಂದರು.
ಬಂಧಿಸಿದ್ದ ರೈತರು, ಮುಖಂಡರನ್ನು ಮಧ್ಯಾಹ್ನ 3ಗಂಟೆ ಸಮಯದಲ್ಲಿ ಬಿಡುಗಡೆಗೊಳಿಸಲಾಯಿತು. ರೈಲು ತಡೆ ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್, ಕಿರಗಸೂರ್ ಶಂಕರ್, ಬರಡನಪುರ ನಾಗರಾಜ್, ನೀಲಕಂಠಪ್ಪ, ವೆಂಕಟೇಶ್, ಸಿದ್ದೇಶ್, ವಿಜೆಯೇಂದ್ರ, ರಾಜೇಶ್, ಮಂಜುನಾಥ್, ಪ್ರಸಾದ್ ನಾಯ್ಕ್, ಪ್ರದೀಪ್, ಮಹದೇವಸ್ವಾಮಿ, ಪ್ರಭುಸ್ವಾಮಿ, ಕೆಂಡಗಣ್ಣಪ್ಪ, ಪರಶಿವಮೂರ್ತಿ, ಸೂರಿ ಉಮೇಶ್, ಬಸವರಾಜು, ನಾಗೇಶ್, ರಂಗರಾಜು, ಮಹದೇವ್, ರಂಗಸ್ವಾಮಿ, ಕೆಂಡಗಣ್ಣಸ್ವಾಮಿ, ನಂಜುಂಡಸ್ವಾಮಿ ಇನ್ನು ಮುಂತಾದವರಿದ್ದರು.