NEWSನಮ್ಮರಾಜ್ಯಬೆಂಗಳೂರು

ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಲೋಕ ಸೇವಾ ಆಯೋಗಗಳು ಅರ್ಹತೆ ಮತ್ತು ನ್ಯಾಯಪರತೆಯನ್ನು ಎತ್ತಿಹಿಡಿದು, ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡುವ ಪ್ರಜಾಪ್ರಭುತ್ವದ ಸ್ತಂಭಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 25ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸೇವೆಯಲ್ಲಿ ಕರ್ನಾಟಕಕ್ಕೆ ಶ್ರೀಮಂತ ಐತಿಹ್ಯವಿದೆ. ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು ದಿವಾನ್ ಕೆ.ಶೇಷಾದ್ರಿ ಅಯ್ಯರ್ ಅವರು 1892 ರಲ್ಲಿಯೇ ಪ್ರಾರಂಭಿಸಿದರು. ಈ ಪ್ರಾರಂಭಿಕ ಹೆಜ್ಜೆಯು ವಿಶಿಷ್ಟ ಆಡಳಿತಗಾರರ ಪಡೆಯನ್ನು ನೇಮಕಾತಿ ಮಾಡಿಕೊಳ್ಳಲು ಭದ್ರಬುನಾದಿಯನ್ನು ಹಾಕಿದ್ದು, ಕರ್ನಾಟಕ ಈ ಪರಂಪರೆಯನ್ನು ಹೆಮ್ಮೆಯಿಂದ ಮುಂದುವರೆಸಿಕೊಂಡು ಬಂದಿದೆ ಎಂದು ತಿಳಿಸಿದರು.

ಇನ್ನು ಕರ್ನಾಟಕ ಲೋಕ ಸೇವಾ ಆಯೋಗವು 1951ರಲ್ಲಿ ಸಂವಿಧಾನಾತ್ಮಕ ಸಂಸ್ಥೆಯಾಗಿ ಸ್ಥಾಪನೆಯಾಗಿದ್ದು, ನಂತರದಲ್ಲಿ ಸಾಕಷ್ಟು ವಿಕಾಸಗೊಂಡಿದೆ. ಅಲ್ಲದೆ ದಕ್ಷತೆ ಮತ್ತು ಪಾರದರ್ಶಕತೆಗೆ ಗುರುತಾಗಿದೆ. ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನಮ್ಮ ಸರ್ಕಾರ ಕೆಲವು ಪ್ರಮುಖ ಸುಧಾರಣೆಗಳನ್ನು ಜಾರಿಮಾಡಿದೆ.

ಅವುಗಳಲ್ಲಿ – ಗ್ರೂಪ್: ಸಿ ಹುದ್ದೆಗಳಿಗೆ ಸಂದರ್ಶನವನ್ನು ರದ್ದುಗೊಳಿಸುವುದು, ಗ್ರೂಪ್ ಬಿ ಹುದ್ದೆಗಳಿಗೆ ಹಾಗೂ ಗೆಜೆಟೆಡ್ ಪ್ರೋಬೇಶನರ್ಸ್ ಪರೀಕ್ಷೆಗಳಲ್ಲಿ ಸಂದರ್ಶನದ ಅಂಕಗಳನ್ನು ಕಡಿತಗೊಳಿಸಲಾಗಿದೆ. ನ್ಯಾಯಯುತ ಹಾಗೂ ಪಾರದರ್ಶಕತೆಯನ್ನು ಪ್ರೋತ್ಸಾಹಿಸಲು ನೇಮಕಾತಿ ಮಾದರಿಗಳನ್ನು ಸರಳೀಕೃತಗೊಳಿಸಿದೆ ಎಂದು ವಿವರಿಸಿದರು.

ಕರ್ನಾಟಕ ಲೋಕ ಸೇವಾ ಆಯೋಗ (ನೇರ ನೇಮಕಾತಿ) ನಿಯಮಗಳು 2021ನ್ನು ಪರಿಚಯಿಸಿದ್ದು, ಇದು ವ್ಯಕ್ತಿತ್ವ ಪರೀಕ್ಷೆಯ ಮೌಲ್ಯಕ್ಕಿಂತ, ಪ್ರಮಾಣೀಕರಿಸಿದ ಪ್ರಕ್ರಿಯೆಗಳಿಗೆ ಒತ್ತು ನೀಡಿದೆ ಎಂದರು.

ಪ್ರಶ್ನೆಪತ್ರಿಕೆ ಸೋರಿಕೆಗಳಂತಹ ಸವಾಲುಗಳನ್ನು ಎದುರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಾರದರ್ಶಕತೆಯನ್ನು ಖಾತ್ರಿಗೊಳಿಸಲು ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಪುನಃ ಗಳಿಸಲು ದೃಢವಾದ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅತ್ಯಗತ್ಯ. ಹೆಚ್ಚುತ್ತಿರುವ ನಿರುದ್ಯೋಗವು ನ್ಯಾಯಯುತ ಹಾಗೂ ತ್ವರಿತ ನೇಮಕಾತಿ ಪ್ರಕ್ರಿಯೆಗಳನ್ನು ಬೇಡುತ್ತದೆ. ಯು. ಪಿ. ಎಸ್.ಸಿ ಯಲ್ಲಿರುವಂತೆ ಸಕಾಲಕ್ಕೆ ಫಲಿತಾಂಶ ಪ್ರಕಟಿಸುವುದು ಮಾದರಿಯಾಗಬಲ್ಲದು ಎಂದರು.

ಲೋಕ ಸೇವಾ ಆಯೋಗಗಳ ವಿರುದ್ಧ ಇರುವ ಬ್ಯಾಕ್ ಲಾಗ್ ಪ್ರಕರಣಗಳನ್ನು ಬಗೆಹರಿಸುವುದು ದಕ್ಷತೆಯ ಸುಧಾರಣೆ ಹಾಗೂ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಲು ಮುಖ್ಯವಾಗಿದೆ. ಕೆಪಿಎಸ್‌ಸಿಯನ್ನು ಸದೃಢಗೊಳಿಸಲು ಹೆಚ್ಚಿನ ಸಂಪನ್ಮೂಲಗಳು, ಸಿಬ್ಬಂದಿ ಹಾಗೂ ಮೂಲಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಇತರ ರಾಜ್ಯಗಳು ಅನುಸರಿಸುವ ಮಾರ್ಗಗಳು ಹಾಗೂ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ ಮಾಡಲಾಗುವುದು ಎಂದು ಹೇಳಿದರು.

ಮಹಿಳೆಯರು, ಯುವಜನರು ಹಾಗೂ ನಿರ್ಲಕ್ಷಿತ ವರ್ಗಗಳೂ ಸೇರಿದಂತೆ ಎಲ್ಲರನ್ನೂ ಒಳಗೊಂಡಂತೆ ಅವಕಾಶಗಳನ್ನು ನೀಡುವುದು ಸರ್ಕಾರದ ಆಶಯವಾಗಿದೆ. ಸ್ವತಂತ್ರ ಪರೀಕ್ಷಾ ನಿಯಂತ್ರಕರ ಹುದ್ದೆಗಳನ್ನು ಸೃಜಿಸುವ ಮೂಲಕ ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾದ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ನಂಬಿಕೆಯಿರಿಸಿದೆ. ಜನಕೇಂದ್ರಿತವಾಗಿದ್ದುಕೊಂಡು ಭವಿಷ್ಯದ ಸವಾಲುಗಳನ್ನು ಎದುರಿಸುವಂತಹ ಆಡಳಿತ ವೈಖರಿಯನ್ನು ಲೋಕಸೇವಾ ಆಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉತ್ತಮ ಆಡಳಿತಕ್ಕಾಗಿ ಸರ್ಕಾರಿ ನೌಕರರಿಗೆ ಗುಣಮಟ್ಟದ ಸೇವೆಗೆ ತರಬೇತಿ ನೀಡುವುದು ಅವಶ್ಯವಾಗಿದೆ. ಈ ದಿಸೆಯಲ್ಲಿ ಇಂದು ನಡೆಯುತ್ತಿರುವ ಸಮ್ಮೇಳನ, ಅರ್ಥಪೂರ್ಣ ಚರ್ಚೆ, ಸಹಯೋಗ ಹಾಗೂ ವಿಚಾರ ವಿನಿಯಮಗಳ ಮೂಲಕ ಶಕ್ತಿ ತುಂಬಲಿದೆ. ನಾಗರಿಕ ಸೇವಾ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನಿಷ್ಠೆ ಹಾಗೂ ಹೊಣೆಗಾರಿಕೆಯನ್ನು ಕಾಪಾಡುವಲ್ಲಿ ಕರ್ನಾಟಕದ ಬದ್ಧತೆಯನ್ನು ನಿರೂಪಿಸುತ್ತದೆ ಎಂದು ಹೇಳಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ