ವೈಕುಂಠ ಏಕಾದಶಿ ಸಂಭ್ರಮ: ಸ್ವರ್ಗದ ದ್ವಾರ ಹಾದು ಪುನೀತರಾದ ಭಕ್ತರು
ಬೆಂಗಳೂರು: ಸ್ವರ್ಗದ ಬಾಗಿಲು ತೆರೆಯುವ ಪುಣ್ಯದಿನವಾದ ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮದಲ್ಲಿ ನಾಡಿನ ಬಹುತೇಕ ನಿವಾಸಿಗಳು ಭಾಗಿಯಾಗಿದ್ದಾರೆ.
ಈ ದಿನ ಭಕ್ತರು ಶ್ರೀನಿವಾಸ, ವೆಂಕಟೇಶ್ವರ, ತಿಮ್ಮಪ್ಪನ ದೇಗುಲಗಳಲ್ಲಿ ಮುಂಜಾನೆ 5.30ರಿಂದ ಸಾಲುಗಟ್ಟಿ ನಿಂತು ಪದ್ಮಾವತಿ ಸಹಿತ ಶ್ರೀನಿವಾಸನ ಹಾಗೂ ವೆಂಕಟೇಶ್ವರ ದರ್ಶನಕ್ಕಾಗಿ ಸ್ವರ್ಗದ ದ್ವಾರ ಹಾದು ಹೋಗಿ, ಪುನೀತರಾಗುವ ಕ್ಷಣದಲ್ಲಿ ಪಾಲುದಾರರಾಗಿದ್ದಾರೆ ಎಂದೇ ಈ ದಿನವನ್ನ ಭಾವಿಸಲಾಗಿದೆ.
ಕೊರೊನಾ ಆತಂಕದ ನಡುವೆಯೂ ಭಕ್ತರು ದೇಗುಲಗಳಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಕೊರೊನಾ ಆತಂಕದಿಂದ ದೂರವಾಗಿ ಕೆಲವು ದೇವಾಲಯಗಳಲ್ಲಿ ಮಾಸ್ಕ್ ಇಲ್ಲದೆ ಎಲ್ಲರೊಳು ಒಂದಾಗಿಯೇ ಏಕಾದಶಿಯ ಸಂಭ್ರಮದಲ್ಲಿ ಮಿಂದೆದ್ದರು.
ಬೆಂಗಳೂರಿನ ಪದ್ಮನಾಭನಗರದ ವೆಂಕಟರಮಣ ದೇಚಾಲಯ, ವಸಂತಪುರದ ಪದ್ಮಾವತಿ ಸಹಿತ ಶ್ರೀನಿವಾಸ ದೇವಾಲಯ, ಜೆ.ಪಿ.ನಗರ, ರಾಜರಾಜೇಶ್ವರಿನಗರ, ಸೇರಿದಂತೆ ಬೆಂಗಳೂರಿನ ವೆಂಕಟೇಶ್ವರ ದೇವಾಲಯಗಳಲ್ಲಿ ನಿರ್ಮಿಸಿದ್ದ ಸ್ವರ್ಗದ ದ್ವಾರ ಹಾದು ಹೋಗುವ ಮೂಲಕ ಭಕ್ತರು ಭಕ್ತಿಭಾವದಿಂದ ದೇವರಲ್ಲಿ ಪ್ರಾರ್ಥಿಸಿದರು.
ಇನ್ನು ಇದಿಷ್ಟೇ ಅಲ್ಲದೆ ಮೈಸೂರು, ಹಾಸನ, ರಾಮನಗರ, ಮಂಡ್ಯ, ಚಾಮರಾನಜನಗರ, ಕಲಬುರಗಿ, ಹುಬ್ಬಳ್ಳಿ, ಗದಗ್, ವಿಜಯಪುರ ಒಳಗೊಂಡಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ವೆಂಕಟೇಶ್ವರ ದೇವಾಲಯಗಳಲ್ಲಿ ಸ್ವರ್ಗದ ದ್ವಾರ ನಿರ್ಮಿಸಲಾಗಿತ್ತು. ಸ್ವರ್ಗದ ದ್ವಾರ ಹಾದು ಬಂದ ಭಕ್ತರಿಗೆ ಲಡ್ಡುಗಳನ್ನು ಪ್ರಸಾದವಾಗಿ ದೇವಾಲಯಗಳ ಆಡಳಿತ ಮಂಡಳಿಯಿಂದ ವಿತರಿಸಲಾಯಿತು.
ವೈಕುಂಠ ಏಕಾದಶಿಯ ಸಂಭ್ರಮ ರಾಜ್ಯಾದ್ಯಂತ ಕಂಡು ಬಂದಿತು. ಹೀಗಾಗಿ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ- ಕೈಂಕರ್ಯಗಳು ನಡೆದವು. ವೈಕುಂಠ ಏಕಾದಶಿಯ ದಿನ ಬೆಳಗ್ಗೆ ದೇವರ ದರ್ಶನ ಮಾಡುವುದರಿಂದ ವಿಷ್ಣು ಎಲ್ಲರ ಕಷ್ಟಗಳನ್ನು ಆಲಿಸಿ, ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದು ಹೇಳಲಾಗುತ್ತದೆ.
ಏಕಾದಶಿ ವಿಶೇಷ: ವೈಕುಂಠ ಏಕಾದಶಿಯನ್ನು ಪೌಷ ಪುತ್ರದಾ ಏಕಾದಶಿ, ಮುಕ್ಕೋಟಿ ಏಕಾದಶಿ, ಭೀಷ್ಮ ಏಕಾದಶಿ ಎಂದೂ ಸಹ ಕರೆಯುತ್ತಾರೆ. ಈ ದಿನ ವಿಷ್ಣು ಹಾಗೂ ವಿಷ್ಣುವಿನ ಅವತಾರದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಜನರ ನಂಬಿಕೆ.
ವೈಕುಂಠ ಏಕಾದಶಿಯ ದಿನ ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರ ಎಂಬ ವಿಶೇಷ ಪ್ರವೇಶವನ್ನು ನಿರ್ಮಿಸಲಾಗುತ್ತದೆ. ಈ ಮಂಗಳಕರ ದಿನದಂದು ಈ ದ್ವಾರವನ್ನು ಹಾದು ಹೋಗುವವರು ವೈಕುಂಠವನ್ನು ತಲುಪುತ್ತಾರೆ ಎಂದು ಸಹ ಹೇಳಲಾಗುತ್ತದೆ. ವೈಕುಂಠ ಏಕಾದಶಿ ವ್ರತವನ್ನು ಮಾಡುವವರು ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಿ, ಉಪವಾಸ ಮಾಡುವ ಸಂಕಲ್ಪ ಮಾಡುತ್ತಾರೆ.
ಈ ಏಕಾದಶಿ ವ್ರತವನ್ನು ಆಚರಿಸುವವರು, ಧೂಪ ಮಾಡಿ ದೀಪ ಬೆಳಗಿಸಿ, ನೈವೇದ್ಯ ಮಾಡಿ ಬಳಿಕ ಹದಿನಾರು ಪದಾರ್ಥಗಳಿಂದ ವಿಷ್ಣುವನ್ನು ವಿಶೇಷವಾಗಿ ಪೂಜಿಸುತ್ತಾರೆ. ಬಳಿಕ ವಿಷ್ಣು ಅಥವಾ ಆತನ ಅವತಾರದ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾವಿಷ್ಣುವಿಗೆ ಹೂವಿನ ಹಾರ, ನೈವೇದ್ಯ ಮತ್ತು ಬಾಳೆಹಣ್ಣು ಅರ್ಪಿಸುತ್ತಾರೆ.
ವ್ರತ ಆಚರಿಸುವವರು ಕೊನೆಯಲ್ಲಿ ರಾತ್ರಿ ದೀಪದಾನ ಮಾಡುವುದು ಕೂಡ ಶ್ರೇಷ್ಠವಾಗಿದೆ. ವ್ರತದ ವೇಳೆ ಮಹಾವಿಷ್ಣುವಿನ ಮಂತ್ರ, ಶ್ರೀ ಹರಿ ಸ್ತೋತ್ರಂ, ವಿಷ್ಣು ಸಹಸ್ರ ನಾಮ ಮತ್ತು ಏಕಾದಶಿ ವ್ರತ ಕಥೆಯನ್ನು ಪಠಿಸುವುದರಿಂದ ವ್ರತ ಪೂರ್ಣಗೊಳ್ಳುತ್ತದೆ ಎಂಬುದು ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ.
![](https://vijayapatha.in/wp-content/uploads/2024/02/QR-Code-VP-1-1-300x62.png)