NEWSನಮ್ಮಜಿಲ್ಲೆನಮ್ಮರಾಜ್ಯ

ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು: ಕಾನೂನು ಸಚಿವ ಎಚ್.ಕೆ.ಪಾಟೀಲ್

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ರಾಜ್ಯದಲ್ಲಿ ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ನಗರದ ಜಿಲ್ಲಾ ನೂತನ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಶನಿವಾರ ಜಿಲ್ಲಾ ವಕೀಲರ ಸಂಘದ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಸಮಾಜ ಅಥವಾ ಗ್ರಾಮ ಅಭಿವೃದ್ಧಿ ಆಗಬೇಕಾದರೆ ವ್ಯಾಜ್ಯಗಳು ಇರಬಾರದು. ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ. ಇಂದು ಕಾರ್ಪೋರೇಟ್ ಜಗತ್ತಿನಲ್ಲಿ ವಕೀಲ ವೃತ್ತಿಗೆ ಸಾಕಷ್ಟು ಅನುಕೂಲಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೋರ್ಟ್‌ಗಳಲ್ಲಿ ಸಾಮಾನ್ಯ ವ್ಯಕ್ತಿಗೂ, ಕಕ್ಷಿದಾರರಿಗೆ ಸಂವಿಧಾನತ್ಮಾಕವಾಗಿ ಗೌರವ ಸಿಗಬೇಕಿದೆ. ಕಕ್ಷಿದಾರನ ಗೌರವ ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾನೂನು ಹಾಗೂ ನೀತಿ ಜಾರಿಗೊಳಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಅಭಿವೃದ್ಧಿಗೊಂಡಿದ್ದು, ವ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ನ್ಯಾಯಾಲಯಗಳಲ್ಲಿ ಮಾತೃಭಾಷೆಯಲ್ಲಿ ಜಡ್ಜ್‌ಮೆಂಟ್‌ಗಳು ಬರಬೇಕು. ಸಾಮಾನ್ಯ ಭಾಷೆಯಲ್ಲಿ ಕಾನೂನನ್ನು ಜನರಿಗೆ ತಿಳಿಯುವಂತಹ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಅದಕ್ಕಾಗಿ ಸಾಕ್ಷರತೆ ಅಭಿಯಾನದಂತೆ ಸಂವಿಧಾನದ ಸಾಕ್ಷರತೆ ಅಭಿಯಾನವನ್ನು ನ.26ರಿಂದ ಹಮ್ಮಿಕೊಳ್ಳಲಾಗುತ್ತಿದೆ. ಸಂವಿಧಾನದ ಬಗ್ಗೆ ಕೇವಲ ಶಿಕ್ಷಕರು ಮಾತ್ರ ಅಲ್ಲದೆ ವಕೀಲರು ಕೂಡ ಜನಸಾಮಾನ್ಯರಿಗೆ ತಿಳಿಸಬೇಕು. ಗ್ರಾಮ ನ್ಯಾಯಾಲಯ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ವಹಿಸಿದ್ದು, ಜನರ ಮನೆ ಬಾಗಿಲಿಗೆ ನ್ಯಾಯದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಕರ್ನಾಟಕ ಏಕೀಕರಣದಲ್ಲಿ ಬಳ್ಳಾರಿಯ ವಕೀಲರ ಪಾತ್ರ ಮುಖ್ಯವಾಗಿದೆ. ಜತೆಗೆ ನ್ಯಾಯದಾನ ಮಾಡುವುದಲ್ಲಿ ಕೀರ್ತಿ ತಂದಿದ್ದಾರೆ. ವಕೀಲರ ಸಂಘ ಅತ್ಯುತ್ತಮ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮಾತನಾಡಿ, ವ್ಯಾಜ್ಯಗಳನ್ನು ತುರ್ತಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ. ಬಳ್ಳಾರಿಯಲ್ಲಿ ನಿರ್ಮಿಸಿರುವ ನ್ಯಾಯಾಲಯದ ಸಂಕೀರ್ಣ ಒಂದೇ ಸೂರಿನಡಿಯಲ್ಲಿ ಎಲ್ಲ ಸೌಲಭ್ಯವನ್ನು ಒಳಗೊಂಡಿದೆ. ಸಾಮಾನ್ಯ ಜನರಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ವಕೀಲರು ಕೆಲಸ ಮಾಡಬೇಕು ಎಂದರು.

ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘದ ರೀತಿಯಲ್ಲಿ ಬಳ್ಳಾರಿಯಲ್ಲಿಯೂ ವಕೀಲರ ಸಂಘ ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸಲು ಕ್ರಮ ವಹಿಸಲಾಗುವುದು. ಗುಣಮಟ್ಟದ ತರಬೇತಿ ಪಡೆದು ನ್ಯಾಯಾಂಗ ವ್ಯವಸ್ಥೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡ್ಯೊಯ್ಯುವ ಕೆಲಸ ಆಗಬೇಕು ಎಂದು ತಿಳಿಸಿದರು.

ಬಳ್ಳಾರಿ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ್ ಕಿಣಗಿ ಮಾತನಾಡಿ, 58 ಎಕರೆ ಪ್ರದೇಶದಲ್ಲಿ ವಿಶಾಲವಾಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣವೂ ಅನೇಕ ಸೌಲಭ್ಯವನ್ನು ಹೊಂದಿದೆ. ಈಗಾಗಲೇ ಇನ್ನುಳಿದ ಕಾಮಗಾರಿಗಳನ್ನು ಪೂರೈಸಲು ಸರ್ಕಾರದಿಂದ ಹೆಚ್ಚುವರಿಯಾಗಿ 21 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಹೈಕೋರ್ಟ್‌ನ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್‌ಕುಮಾರ್, ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಜೆ.ಎಂ.ಅನಿಲ್‌ಕುಮಾರ್, ವಕೀಲರ ಪರಿಷತ್ ಸದಸ್ಯ ಕೆ.ಕೋಟೇಶ್ವರರಾವ್, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಸ್.ಎಚ್.ಪುಷ್ಪಾಂಜಲಿದೇವಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ರವೀಂದ್ರನಾಥ್, ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಮುಖ್ಯ ಅಭಿಯಂತರ ಜಗನ್ನಾಥ್ ಹಲಿಂಗೆ ಮತ್ತಿತರರಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ