ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 27, 2024 ರಂದು “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರು ವಿನೂತನ ಪ್ರತಿಭಟನೆ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಇಪಿಎಸ್ ಪಿಂಚಣಿದಾರರ ವಿನೂತನ ಪ್ರತಿಭಟನೆ ಬಳಿಕ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಇತ್ತೀಚೆಗೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ನಮ್ಮ ಮುಖಂಡರಾದ ಕಮಾಂಡರ್ ಅಶೋಕ್ ರಾವತ್, ವೀರೇಂದ್ರ ಸಿಂಗ್ ರಜಾವತ್, ರಮಕಾಂತ್ ನರಗುಂದ, ಪಿ.ಎನ್. ಪಾಟೀಲ್ ಹಾಗೂ ರಾಜೀವ್ ಭಟ್ನಾಕರ್ ಅವರ ನಿಯೋಗವು ಒಳ್ಳೆ ವಿಷಯ ಹಂಚಿಕೊಂಡಿದೆ.
ಅದು ಕಳೆದ ಶುಕ್ರವಾರ ದೆಹಲಿಯಲ್ಲಿ, ಕೇಂದ್ರ ಕಾರ್ಮಿಕ ಹಾಗು ಉದ್ಯೋಗ ಖಾತೆಯ(minister for labour & employment) ಸಚಿವ ಮನ್ಸೂಖ್ ಮಾಂಡವೀಯ ಹಾಗೂ ಇಪಿಎಫ್ಒ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ, ಕನಿಷ್ಠ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ, ಎಲ್ಲ ನ್ಯೂನ್ಯತೆಗಳನ್ನು ತೊಡೆದು ಹಾಕಿ, ಇಪಿಎಸ್ ನಿವೃತ್ತರಿಗೆ ಹೇಗೆ ರೂ 7500 + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ನೀಡಬಹುದು ಎಂಬ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಪ್ರಸ್ತುತಪಡಿಸಿದೆ.
ಈ ಬಗ್ಗೆ ಸಚಿವರು ಪ್ರತಿಕ್ರೀಯಿಸಿ, ಬರುವ ಫೆಬ್ರವರಿ 1, 2025 ರಂದು ಪ್ರಾರಂಭವಾಗುವ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪು 2022, ಈ ಎರಡು ಅಂಶಗಳಿಗೆ ಸಂಬಂಧಿಸಿದಂತೆ, ಕೇಂದ್ರ ಹಣಕಾಸು ಸಚಿವಾಲಯದಿಂದ ಒಪ್ಪಿಗೆ ಪಡೆದು, ಪ್ರಸ್ತಾವನೆಯನ್ನು ಅಧಿವೇಶನದಲ್ಲಿ ಮಂಡಿಸಿ, ಇದೇ ಅಧಿವೇಶನದಲ್ಲಿ ಈಡೇರಿಸಿ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ.
ದೇಶಾದ್ಯಂತ ಇರುವ ರಾಷ್ಟ್ರೀಯ ಸಂಘರ್ಷ ಸಮಿತಿಯ ಮುಖಂಡರ ಜೂಮ್ ಮೀಟಿಂಗ್ ಡಿಸೆಂಬರ್ 24, 2024 ರಂದು ಜರುಗಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ನಮ್ಮ ಚಳವಳಿ ನಿರಂತರವಾಗಿ ನಡೆಯಲಿದ್ದು, ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಅಶೋಕ್ ರಾಹುತ್ ಕರೆ ನೀಡಿದ್ದಾರೆ.
ಇಪಿಎಫ್ಒ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ, ಡಿಸೆಂಬರ್ 27, 2024 ರಂದು “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮವನ್ನು ದೇಶಾದ್ಯಂತ ನಡೆಸಿ, ನಿವೃತ್ತರ ಎಲ್ಲ ಕುಂದು ಕೊರತೆಗಳನ್ನು ಬಗೆಹರಿಸಿಕೊಡುತ್ತೇವೆ ಎಂದು ಪ್ರಚುರಪಡಿಸಿದ್ದು, ಅದರಂತೆ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಕೊಡುವಂತೆ 20ನೇ ಮನವಿ ಪತ್ರವನ್ನು ಸಲ್ಲಿಸಲಾಗುವುದು.
ಇನ್ನು ನಮ್ಮ ಹಿಂದಿನ ಎಲ್ಲ ಮನವಿ ಪತ್ರಗಳಿಗೆ ಸಂಬಂಧಿಸಿದಂತೆ, ಇಪಿಎಫ್ಒ ಅಧಿಕಾರಿಗಳು ಉತ್ತರಿಸಬೇಕು. ಏನೇ ಆಗಲಿ ಯಾರು ಧೃತಿಗೆಡಬಾರದು. ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ಇಪಿಎಸ್ ನಿವೃತ್ತರ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಹಾಗೂ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಹಾಗೂ ನಮ್ಮ ಸಂಘದ ಮುಖಂಡರು, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಹೀಗಾಗಿ ಇಪಿಎಸ್ ನಿವೃತ್ತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಡಿ.27, 2024 ರಂದು ಬೆಳಗ್ಗೆ 11ಗಂಟೆಗೆ ನಗರದ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಪ್ರತಿಭಟನೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ನಂಜುಂಡೇಗೌಡ ಮನವಿ ಮಾಡಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)