ಸಕ್ಕರೆ ಕಾರ್ಖಾನೆ ವಶಕ್ಕೆ ಪಡೆದು ರೈತರು, ಕಾರ್ಮಿಕರಿಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು : ಡಾ.ಮುಖ್ಯಮಂತ್ರಿ ಚಂದ್ರು ಆಗ್ರಹ
ಬೀದರ್: ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚುವಂತೆ ಹೇಳಲಾಗಿದೆ. ಆದರೆ ಸರ್ಕಾರ ಅವುಗಳ ವ್ಯವಹಾರಗಳ ಸಂಬಂಧ ಸರಿಯಾಗಿ ತನಿಖೆ ಮಾಡಿ, ಕಾರ್ಖಾನೆಗಳನ್ನು ವಶಕ್ಕೆ ಪಡೆದು ಕಾರ್ಮಿಕರಿಗೆ ಕೆಲಸ ಕೊಡಲಿ, ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.
ಬೀದರ್ ಜಿಲ್ಲೆಯ ನೂತನ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಂಜಿ ಯೋಜನೆ ಹಲವು ದಶಕಗಳಿಂದ ಹಳ್ಳ ಹಿಡಿದಿದೆ. ಕಾಲುವೆ ಇದೆ, ಗುತ್ತಿಗೆದಾರರಿಗೆ ಹಣ ಸಿಕ್ಕಿದೆ ಆದರೆ ಜನರಿಗೆ ಏನು ಲಾಭವಾಗಿದೆ ಎಂದರು. ಕೋ ಆಪರೇಟಿವ್ ವಿಭಾಗದಲ್ಲಿ ಮೂರು ಸಕ್ಕರೆ ಕಾರ್ಖಾನೆಗಳು ಇದ್ದವು, ಈಗ ಎರಡು ಮಾತ್ರ ಚಾಲನೆಯಲ್ಲಿದೆ, ಒಂದನ್ನು ಮುಚ್ಚಲಾಗಿದೆ. ಯಾವ ಸರ್ಕಾರ ಬಂದರೂ ಇವಕ್ಕೆ ಜೀವ ಕೊಡುವ ಕೆಲಸ ಮಾಡಿಲ್ಲ, 1500 ಕಾರ್ಮಿಕರು ಬೀದಿ ಪಾಲಾಗಿದ್ದಾರೆ, ರೈತರಿಗೆ ಸಮಸ್ಯೆಯಾಗಿದೆ ಇದಕ್ಕೆಲ್ಲಾ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು.
ಇಡೀ ದೇಶದಲ್ಲಿ ನೋಡಿದರೆ ಆಮ್ ಆದ್ಮಿ ಪಕ್ಷ ಮಾತ್ರ ₹8 ಸಾವಿರ ಕೋಟಿ ಉಳಿತಾಯ ಬಜೆಟ್ ನೀಡಿದೆ. ಉಚಿತ ಶಿಕ್ಷಣ, ನೀರು, ಆರೋಗ್ಯ ಎಲ್ಲಾ ನೀಡಿ, ಇಷ್ಟು ಉಳಿತಾಯ ಮಾಡಲಾಗಿದೆ. ಭ್ರಷ್ಟಾಚಾರವನ್ನು ಮಟ್ಟಹಾಕಿದರೆ ಮಾತ್ರ ಇದು ಸಾಧ್ಯ. ಸಿದ್ದರಾಮಯ್ಯ ಅವರ ಸರ್ಕಾರ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಕದ್ದು ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಯೋಜನೆಗಳನ್ನು ಕೊಟ್ಟಿದೆ. ಆದರೆ, ಅದಕ್ಕಾಗಿ ಅವರು ಎಸ್‌ಸಿ ಎಸ್‌ಟಿ ವರ್ಗಕ್ಕೆ ಮೀಸಲಿಟ್ಟಿದ್ದ ₹30 ಸಾವಿರ ಕೋಟಿ ಹಣದಲ್ಲಿ ₹11 ಸಾವಿರ ಕೋಟಿಯನ್ನು ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಸಿಕೊಂಡಿದೆ. ಗ್ಯಾರಂಟಿ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ, ಬೇರೆ ಬೇರೆ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣ ಕಿತ್ತು ಇದಕ್ಕೆ ಬಳಕೆ ಮಾಡಲಾಗುತ್ತಿದೆ ಎಂದರು.
ಪ್ರತಾಪ್ ರೆಡ್ಡಿ 7 ಜಿಲ್ಲೆಯನ್ನೊಳಗೊಂಡ ಪದವೀಧರರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲಿದ್ದು, ಅವರಿಗೆ ನಾವು ಬೆಂಬಲ ನೀಡುತ್ತಿದ್ದೇನೆ. ಜೂನ್‌ನಲ್ಲಿ ಚುನಾವಣೆ ನಡೆಯಲಿದೆ. ಜಿಲ್ಲಾಧ್ಯಕ್ಷರ ಜೊತೆ ಚರ್ಚೆ ಮಾಡಿ, ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆಯುತ್ತಿರುವ ಹನುಮಧ್ವಜ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಚಂದ್ರು, ಈ ರೀತಿಯ ವಿಚಾರಗಳನ್ನು ರಾಜಕೀಯಗೊಳಿಸಬಾರದು. ಶಾಂತಿಯುತವಾಗಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ರಾಜಕೀಯ ಲಾಭಕ್ಕಾಗಿ ಇಂತಹ ವಿವಾದಗಳನ್ನು ದೊಡ್ಡದು ಮಾಡಲಾಗುತ್ತದೆ ಎಂದರು.
ಈಗಾಗಲೇ 15 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡಿದ್ದೇವೆ. ಅರಳಿಕಟ್ಟೆ ಎನ್ನುವ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳನ್ನು ಕೇಳಿದ್ದೇವೆ, ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಬಳಿ ಹಣ ಬಲ ಇಲ್ಲ ಜಂಗಮರಂತೆ ಊರೂರು ಸುತ್ತಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.
ಮಾಧ್ಯಮ ಗೋಷ್ಠಿ ಬಳಿಕ ಬೀದರ್ ಜಿಲ್ಲೆಯ ಸಿಖ್ಖರ ಪವಿತ್ರ ಗುರುದ್ವಾರ ಗುರುನಾನಕ್ ಮಂದಿರಕ್ಕೆ ಭೇಟಿ ನೀಡಿದ ಡಾ. ಮುಖ್ಯ ಮಂತ್ರಿ ಚಂದ್ರು ಪ್ರಾರ್ಥನೆ ಸಲ್ಲಿಸಿದರು. ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಸೀಮ್ ಪಟೇಲ್, ಬೀದರ್ ಜಿಲ್ಲಾಧ್ಯಕ್ಷ ಬ್ಯಾಂಕ್ ರೆಡ್ಡಿ, ಜಿಲ್ಲಾ ಮುಖಂಡರಾದ ಗುಲಾಮ್ ಅಲಿ, ಅವಿನಾಶ್ ಕಮಲಾಪುರ್ ಭಾಗವಹಿಸಿದ್ದರು.