ಬೆಂಗಳೂರು: ಲಾಕ್ ಡೌನ್ ನಿಂದಾಗಿ ಮನೆ ಬಿಟ್ಟು ಹೊರ ಹೋಗದಂತಹ ಪರಿಸ್ಥಿತಿ. ಇದರಿಂದ ನಿತ್ಯಜೀವನ ನಡೆಸೋದು ತುಂಬ ಕಷ್ಟದ ಸಮಯವಾಗಿದೆ. ಇನ್ನು ಮೇ 3 ರ ತನಕ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದು ಅದು ನಾಡಿದ್ದು ಅಂತ್ಯ ಕಾಣಲಿದೆಯಾ ಎಂದು ಇನ್ನು ಕೂಡಾ ಸ್ಪಷ್ಟ ಆಗಿಲ್ಲ.
ಈ ನಡುವೆ ಶೂಟಿಂಗ್ ನಿಂತಿರುವ ಕಾರಣ ಕಿರುತೆರೆ ಕಲಾವಿದರು, ತಂತ್ರಜ್ಞರು ಕೆಲಸವಿಲ್ಲದೇ ಮನೆಯಲ್ಲಿಯೇ ಕುಳಿತಿದ್ದಾರೆ. ಇದರಿಂದ ಕಲಾವಿದರು ನಿತ್ಯ ಜೀವನ ಸಾಗಿಸಲು ತುಂಬ ತೊಂದರೆ ಪಡುತ್ತಿದ್ದಾರೆ. ಅದನ್ನು ಅರಿತ ದಾನಿಗಳು ನೆರವಿಗೆ ಬಂದಿದ್ದು ಸ್ವಲ್ಪಮಟ್ಟಿಗೆ ನೆರವಿನ ಹಸ್ತಚಾಚಿದ್ದಾರೆ.
ಒಂದೆರಡು ದಿನಗಳ ಕಾಲ ಕೆಲಸವಿಲ್ಲದೇ ಕೂರಬಹುದು, ಕಡೇ ಪಕ್ಷ ಒಂದು ವಾರ ಕಳೆಯಬಹುದು, ಆದರೆ ತಿಂಗಳುಗಟ್ಟಲೇ ಮನೆಯಲ್ಲಿ ಕೂತಿರುವುದರಿಂದ ಕೆಲಸವಿಲ್ಲದೇ ಹೊಟ್ಟೆ ತುಂಬಿಸಲು ಕೂಡಾ ಹಲವರಿಗೆ ಕಷ್ಟಸಾಧ್ಯ. ಇದೀಗ ಅಂಥ ಕಲಾವಿದರು, ತಂತ್ರಜ್ಞರ ಕಷ್ಟಕ್ಕೆ ನೆರವಾಗಿದ್ದಾರೆ ಲೇಖಕಿ, ಸಮಾಜಸೇವಕಿ ಸುಧಾ ಮೂರ್ತಿ ಅವರು.
ಸುಧಾ ಮೂರ್ತಿಯವರು ಕಷ್ಟದಲ್ಲಿರುವ ಕಿರುತೆರೆ ಕಲಾವಿದರು, ತಂತ್ರಜ್ಞರಿಗೆ ರೇಷನ್ ಕಿಟ್ ವಿತರಿಸುವ ಮೂಲಕ ಸಹಾಯ ಮಾಡಿದ್ದಾರೆ. ಬರೋಬ್ಬರಿ 3000 ಕಿಟ್ ವಿತರಿಸಿರುವ ಅವರು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿದ್ದಾರೆ. ಸುಧಾ ಮೂರ್ತಿಯವರ ಮಾಡಿರುವಂತಹ ಈ ಮಹಾತ್ಕಾರ್ಯಕ್ಕೆ ಟೆಲಿವಿಷನ್ ಅಸೋಸಿಯೇಷನ್ ಧನ್ಯವಾದ ಅರ್ಪಿಸಿದೆ.