ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಶಕ್ತಿಯೋಜನೆ ಮೂಲಕ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿರುವುದರಿಂದ ಪ್ರಸ್ತುತ ಖಾಸಗಿ ಬಸ್, ಆಟೋ, ಕ್ಯಾಬ್‌ಗಳ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಈ ಎಲ್ಲರೂ ಮುಂದಾಗಿದ್ದಾರೆ.
ಇದೇ ಜುಲೈ 27 ರಂದು ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‍ಗಳ ಮಾಲೀಕರು ಮತ್ತು ಚಾಲಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದ್ದು, ಹೀಗಾಗಿ ಜು.26ರ ಮಧ್ಯರಾತ್ರಿ 12 ರಿಂದ 27ರ ಮಧ್ಯರಾತ್ರಿಯವರೆಗೂ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‍ಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಕೆಲ ನೀತಿಗಳಿಂದ ಖಾಸಗಿ ಸಾರಿಗೆಗೆ ನಷ್ಟವಾಗುತ್ತಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಖಾಸಗಿ ಸಾರಿಗೆ ಪ್ರಯಾಣಿಕ ವಾಹನಗಳ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಶಕ್ತಿ ಯೋಜನೆ, ವೈಟ್ ಬೋರ್ಡ್ ವಾಹನವನ್ನು ವಾಣಿಜ್ಯ ವಾಹನವಾಗಿ ಉಪಯೋಗಿಸುತ್ತಿರುವುದು, ದ್ವಿಚಕ್ರ ವಾಹನಗಳಿಗೆ ಮುಕ್ತ ಪರವಾನಿಗೆ ನೀಡುತ್ತಿರುವುದು ಸೇರಿದಂತೆ ಹಲವು ಯೋಜನೆಗಳಿಂದ ಖಾಸಗಿ ಸಾರಿಗೆ ನೆಲಕಚ್ಚಿ ಹೋಗಿದೆ ಎಂದು ಖಾಸಗಿ ಸಾರಿಗೆ ಮಾಲೀಕರು ಆರೋಪಿಸಿದ್ದಾರೆ.
ಸರ್ಕಾರದ ಈ ನೀತಿಗಳಿಂದ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಚಾಲಕರು ಮಾಡಿರುವ ಸಾಲ, ವಿಮೆ ಕಟ್ಟಲು ಮತ್ತು ಜೀವನ ಸಾಗಿಸಲು ಕಷ್ಟಪಡುವಂತಾಗಿದೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯದ 23 ಸಾರಿಗೆ ಸಂಘಟನೆಗಳು ಸೇರಿ ಪ್ರತಿಭಟನೆಗೆ ಮುಂದಾಗುತ್ತಿರುವುದಾಗಿ ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)