ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್
ಹಾವೇರಿ: ಚೆಲಿಸುತ್ತಿದ್ದ ಬಸ್ ಹತ್ತಲು ಹೋಗಿ ವೃದ್ಧೆಯೊಬ್ಬರು ಕೆಳಗೆ ಬಿದ್ದ ಪರಿಣಾಮ ಬಸ್ಸಿನ ಹಿಂಬದಿ ಚಕ್ರ ಹರಿದು ಎರಡು ಕಾಲುಗಳು ತುಂಡಾಗಿರುವ ಘಟನೆ ನಗರದ ಕೇಂದ್ರ ನಿಲ್ದಾಣದಲ್ಲಿ ಮಂಗಳವಾರ ಸಂಜೆಸಂಭವಿಸಿದೆ.
ಹಾವೇರಿ ಜಿಲ್ಲೆಯ ತವರುಮೆಳ್ಳಿಹಳ್ಳಿ ಗ್ರಾಮದ ನಿವಾಸಿ ಗಿರಿಜವ್ವ ನಾಗಪ್ಪ ಕಟ್ಟೂರ (70) ಕಾಲು ಕಳೆದುಕೊಂಡ ವದ್ಧೆಯಾಗಿದ್ದಾರೆ.
ಗಿರಿಜವ್ವ ಅವರು ಮಗುವಿನ ತೊಟ್ಟಿಲು ಕಾರ್ಯಕ್ರಮಕ್ಕೆಂದು ಮೂಡಲಗಿಗೆ ಹೋಗಿದ್ದರು. ಅಲ್ಲಿಂದ ಹಾವೇರಿಗೆ ವಾಪಸ್ ಬಂದು ತಮ್ಮೂರಿಗೆ ಹೋಗಲು ಸವಣೂರು ಮಾರ್ಗದ ಬಸ್ ಹತ್ತುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಗಿರಿಜವ್ವ ಅವರ ಎರಡೂ ಕಾಲುಗಳು ತುಂಡರಿಸಿ ರಕ್ತಸಿಕ್ತವಾಗಿದ್ದವು. ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಕಳುಹಿಸಲಾಗಿದೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಂಬಂಧಿಕರು ಹೇಳಿದಾರೆ.
ಹಾವೇರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹಾವೇರಿ ಸವಣೂರು ಮಾರ್ಗದ ಬಸ್‌ಗೆ ಹತ್ತಲು ಜನರು ಮುಗಿಬಿದ್ದಿದ್ದರು. ಬಸ್‌ಗೆ ಎರಡು ಬಾಗಿಲು ಇದ್ದು, ಎರಡೂ ಕಡೆಯೂ ಜನರು ಹತ್ತುತ್ತಿದ್ದರು. ವೃದ್ಧೆ ಗಿರಿಜವ್ವ ಅವರು, ಮುಂದಿನ ಬಾಗಿಲಿನಲ್ಲಿ ಹತ್ತುತ್ತಿದ್ದರು. ಅದೇ ಸಂದರ್ಭದಲ್ಲಿ ಚಾಲಕ, ಬಸ್ ಚಲಾಯಿಸಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ಬಸ್ ಮುಂದಕ್ಕೆ ಹೋಗಿದ್ದರಿಂದ ವೃದ್ಧಿ ಆಯತಪ್ಪಿ ಬಿದ್ದಿದ್ದರು. ಅವರ ಎರಡೂ ಕಾಲುಗಳ ಮೇಲೆಯೇ, ಬಸ್ಸಿನ ಹಿಂಬದಿ ಚಕ್ರ ಹರಿಯಿತು ಎಂದು ತಿಳಿಸಿದರು.
ಈ ನಿಲ್ದಾಣದಲ್ಲೇ ನ.19ರಂದು ಬಸ್ಸಿನ ಚಕ್ರ ಕಾಲುಗಳ ಮೇಲೆ ಹರಿದಿದ್ದರಿಂದ ರೈತ ಕರಿಯಪ್ಪ ಮುಚ್ಚಿಕೊಪ್ಪನವರ ಮೃತಪಟ್ಟಿದ್ದರು. ಪದೇಪದೇ ಅವಘಡಗಳು ಸಂಭವಿಸುತ್ತಿದ್ದು, ನಿಲ್ದಾಣದಲ್ಲಿ ಓಡಾಡಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸುರಕ್ಷಿತ ವ್ಯವಸ್ಥೆ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.