ಹಾಸನ: ಎಚ್.ಐ.ವಿ. ಪೀಡಿತರು, ಸೋಂಕಿತರು ಮತ್ತು ತೃತೀಯ ಲಿಂಗಿಗಳಿಗೆ ಇರುವ ಯೋಜನೆಗಳನ್ನು ಸಂಬಂಧಿಸಿದ ಇಲಾಖೆಗಳು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಶ್ರಮಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳಿಗೆ ಸಾಮಾಜಿಕ ಸವಲತ್ತುಗಳ ಕುರಿತು ಸಮನ್ವಯ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಎಚ್.ಐ.ವಿ. ಪಾಸಿಟಿವಿ ಇರುವ ಸಮುದಾಯ, ಮಹಿಳಾ ಲೈಂಗಿಕ ಕಾರ್ಯಕರ್ತೆಯರ ಸಮಿತಿ, ತೃತೀಯ ಲಿಂಗಿಗಳ ಸಮುದಾಯದವರು ಸಭೆಗಳನ್ನು ನಡೆಸಲು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಕಚೇರಿಗಾಗಿ ಕೊಠಡಿ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಕ್ರಮವಹಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಎಚ್.ಐ.ವಿ. ಬಾದಿತರು ಮತ್ತು ಸೋಂಕಿತರಿಗೆ, ತೃತೀಯ ಲಿಂಗಿಗಳಿಗೆ ಇರುವ ಯೋಜನೆಗಳ ಬಗ್ಗೆ ಆಯಾ ಸಮುದಾಯದ ಅರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಿ ಸೌಲಭ್ಯ ಪಡೆಯುವಂತೆ ಅರಿವು ಮೂಡಿಸಿರೆಂದು ಹೇಳಿದರಲ್ಲದೆ, ಫಲಾನುಭವಿಗಳಿರುವ ಪ್ರದೇಶಗಳಲ್ಲೇ ಸ್ಥಳವಿದ್ದರೆ ಅಲ್ಲಿಯೇ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸಿರೆಂದು ಸಂಬಂಧಿತ ಅಧಿಕಾರಿಗಳಿಗೆ ಜಿಪಂ ಸಿಇಒ ಬಿ.ಎ. ಪರಮೇಶ್ ಹೇಳಿದರು.
ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಆರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯ್ತಿಗಳ ಸಹಕಾರದಿಂದ ಇವರೆಗೂ 100 ಹಳ್ಳಿಗಳಲ್ಲಿ 18 ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗಿದೆ. 2019ರಲ್ಲಿ ಶಿಬಿರಗಳಲ್ಲಿ 1494 ಜನರಲ್ಲಿ ಎಚ್.ಐ.ವಿ., ತಪಾಸಣೆಯನ್ನು ಮಾಡಲಾಗಿದ್ದು, ಕೇವಲ 4 ಎಚ್.ಐ.ವಿ. ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.
ಸಾಮಾನ್ಯವಾಗಿ 100 ಜನರಲ್ಲಿ ಎಚ್.ಐ.ವಿ. ತಪಾಸಣೆ ಮಾಡಿದರೆ ಪಾಸಿಟಿವ್ ಇರುವ ಪ್ರಕರಣಗಳು 0.5% ಮತ್ತು ಗರ್ಭಿಣಿ ಮಹಿಳೆಯರಲ್ಲಿ 0.03% ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಜಿಲ್ಲೆಯು ಎಚ್.ಐ.ವಿ. ಪಾಸಿಟಿವ್ ಪ್ರಕರಣಗಳು ಬಹುತೇಕ ಕಡಿಮೆಯಾಗಿವೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಕುಮಾರ್, ಆರ್.ಸಿ.ಎಚ್. ಅಧಿಕಾರಿ ಡಾ. ಕಾಂತರಾಜ್, ಎಚ್.ಆರ್.ಟಿ. ಆರೋಗ್ಯಾಧಿಕಾರಿ ಡಾ. ಪೂರ್ಣಿಮಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಾದ ಸವಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪಬೋವಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಇದ್ದರು.