ಬೆಂಗಳೂರು: ಲಾಕ್‍ಡೌನ್ ತೆರವಿನ ಬಳಿಕ ಎದುರಾಗುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಮಾರ್ಗೋಪಾಯಗಳ ಬಗ್ಗೆ ನಾನಾ ಕ್ಷೇತ್ರಗಳ ಗಣ್ಯರ ಜತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸಮಾಲೋಚನೆ ಆರಂಭಿಸಿದ್ದಾರೆ.
ಮೊದಲ ಹಂತದಲ್ಲಿ ಕನ್ನಡ ಚಿತ್ರರಂಗ ಹಾಗೂ ಕ್ರೀಡಾಲೋಕದ ದಿಗ್ಗಜರ ಜತೆ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಕರೋನಾ ವೈರಾಣು ಜತೆಗೆ ಮುಂಬರುವ ದಿನಗಳಲ್ಲಿ ಬದುಕು ನಡೆಸುವ ಅನಿವಾರ್ಯತೆ ಎದುರಾಗಿರುವ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು.
ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ರವಿಚಂದ್ರನ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಚಿತ್ರನಟಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಸಂಗೀತ ನಿರ್ದೇಶಕರಾದ ಗುರುಕಿರಣ್, ಅರ್ಜುನ್ ಜನ್ಯ, ವಾಸುಕಿ ವೈಭವ್, ಚಿತ್ರನಟರಾದ ಪುನಿತ್ ರಾಜ್‍ಕುಮಾರ್, ಉಪೇಂದ್ರ, ರವಿಶಂಕರ್, ನೆನಪಿರಲಿ ಪ್ರೇಮ್, ಅಭಿಷೇಕ್ ಅಂಬರೀಷ್, ಚಿತ್ರನಟಿಯರಾದ ತಾರಾವೇಣು, ಶ್ರುತಿ, ರಾಗಿಣಿ ದ್ವಿವೇದಿ, ಖ್ಯಾತ ಕ್ರಿಕೆಟಿಗ ಅನಿಲ್‍ಕುಂಬ್ಳೆ, ಬಿಲಿಯಡ್ರ್ಸ್ ಪಟು ಪಂಕಜ್ ಅಡ್ವಾಣಿ ಅವರ ಜತೆ ಚರ್ಚಿಸಿ ಅವರಿಂದ ಸಲಹೆಗಳನ್ನು ಪಡೆದುಕೊಂಡರು. ಸಂಜೆ ನಟರಾದ ದರ್ಶನ್, ಯಶ್, ಸುದೀಪ್ ಸೇರಿದಂತೆ ಚಿತ್ರರಂಗದ ಸಂಘಟನೆಗಳ ಪ್ರಮುಖರ ಜತೆಗೂ ಸಮಾಲೋಚಿಸಲಿದ್ದಾರೆ.
ಎರಡು ತಾಸು ನಡೆದ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದ ಚಿತ್ರರಂಗ ಮತ್ತು ಕ್ರೀಡಾಲೋಕದ ಗಣ್ಯರು ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮುಂದೆಯೂ ಇದೇ ರೀತಿಯ ಕ್ರಮಗಳ ಮೂಲಕ ರಾಜ್ಯದ ಜನತೆಯ ಸುರಕ್ಷತೆ ಮತ್ತು ದೈನಂದಿನ ಚಟುವಟಿಕೆಗಳಿಗೆ ತೊದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಕೋವಿಡ್ – 19 ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕೈಗೊಳ್ಳುವ ಯಾವುದೇ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಇತ್ತೀಚೆಗೆ ರಾಜ್ಯದ ಕೆ¯ವೆಡೆ ನಡೆದ ಘಟನೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸತತವಾಗಿ ಮನವಿ ಮಾಡಿದರೂ ಗರಿಷ್ಠ ಮಟ್ಟದಲ್ಲಿ ಪಾಲನೆ ಆಗುತ್ತಿಲ್ಲದಿರುವ ವಿಷಯಗಳನ್ನು ಪ್ರಸ್ತಾಪಿಸಿದ ಸಚಿವ ಸುಧಾಕರ್ ಅವರು, “ಕೆಲವರು ಕರೋನಾ ಪೀಡಿತರು ಮತ್ತು ಕುಟುಂಬ ಸದಸ್ಯರನ್ನು ಕಳಂಕಿತರಂತೆ ನೋಡಲಾಗುತ್ತಿದೆ.
ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿರುವ ಪ್ರಕರಣಗಳು ವರದಿಯಾಗಿವೆ. ಇದೊಂದು ಸಾಮಾಜಿಕ ಪಿಡುಗು ಎಂಬ ಮನೋಭಾವ ಕೆಲವರಲ್ಲಿದೆ. ಅದನ್ನು ನಿವಾರಿಸಬೇಕಿದೆ. ರೋಗಕ್ಕೆ ಲಸಿಕೆ ಕಂಡುಹಿಡಿದು ಚಿಕಿತ್ಸೆ ಸಿಗುವ ತನಕ ರೋಗಾಣು ಜತೆ ಬದುಕು ನಡೆಸುವುದು ಅನಿವಾರ್ಯ. ಅದಕ್ಕಾಗಿ ದೈನಂದಿನ ಚಟುವಟಿಕೆಗಳಲ್ಲಿ ಕೆಲ ಬದಲಾವಣೆಗಳನ್ನು ನಾವೆಲ್ಲರೂ ಮಾಡಿಕೊಳ್ಳಲೇಬೇಕಿದೆ. ಈ ಎಲ್ಲ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದರು.
ಈಗಾಗಲೇ ಸರ್ಕಾರ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರತಿಯೊಂದು ಕುಟುಂಬಗಳನ್ನು ತಲುಪಬೇಕಿರುವ ಹಿನ್ನಲೆಯಲ್ಲಿ ಎಲ್ಲ ಕ್ಷೇತ್ರಗಳ ಗಣ್ಯರು, ಸಾಧಕರು ಮತ್ತು ಚುನಾಯಿತ ಪ್ರತಿನಿಧಿಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸಾಕ್ಷ್ಯಚಿತ್ರ ನಿರ್ಮಾಣ ಸೇರಿದಂತೆ ಇತರೆ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆಸರಾಂತ ನಿರ್ದೇಶಕ ಪವನ್ ಒಡೆಯರ್ ನಿರ್ದೇಶಿಸಲಿರುವ ಸಾಕ್ಷ್ಯಚಿತ್ರದಲ್ಲಿಚಿತ್ರರಂಗ, ಕ್ರೀಡಾರಂಗ ಮತ್ತು ಸೇರಿದಂತೆ ನಾನಾ ಕ್ಷೇತ್ರಗಳ ಸಾಧಕರು ಪಾಲ್ಗೊಂಡು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಕೊರೊನಾ ಸೋಂಕಿತ ಮಾಧ್ಯಮ ಪ್ರತಿನಿಧಿಯ ಸಂಪರ್ಕದ ಹಿನ್ನೆಲೆಯಲ್ಲಿ ಸ್ವಯಂ ದಿಗ್ಭಂಧನ ವಿಧಿಸಿಕೊಂಡು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿರುವ ತಾವು ಮುಂದಿನ ಹಂತದಲ್ಲಿ ಸಾಮಾಜಿಕ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಮತ್ತು ಇತರೆ ಪ್ರಮುಖರೊಂದಿಗೆ ಈ ಸಮಾಲೋಚನೆ ಕಾರ್ಯವನ್ನು ಮುಂದುವರಿಸುವುದಾಗಿ ಸಚಿವ ಸುಧಾಕರ್ ತಿಳಿಸಿದ್ದಾರೆ.