ಸಿಬ್ಬಂದಿ ಹಾಜರಾತಿ ಮಾಹಿತಿ ನೀಡಲು ನಿರಾಕರಿಸಿದ ಪಿಡಿಒಗೆ 15 ಸಾವಿರ ರೂ. ದಂಡ
ಚಿತ್ರದುರ್ಗ: ಗ್ರಾಮ ಪಂಚಾಯಿತಿ ಸಿಬ್ಬಂದಿಯ ಹಾಜರಾತಿ ಪುಸ್ತಕದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರಿಗೆ ಹದಿನೈದು ಸಾವಿರ ರುಪಾಯಿ ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಮೂರು ಕಂತುಗಳಲ್ಲಿ ಪಾವತಿಸುವಂತೆ ಆದೇಶ ಹೊರಡಿಸಿದೆ.
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿನ ಸಿಬ್ಬಂದಿಗಳ ಹಾಜರಾತಿಗೆ ಸಂಬಂಧಿಸಿದಂತೆ ಆರ್‌ಟಿಐ ಅಡಿ ಮಾಹಿತಿ ಕೇಳಲಾಗಿತ್ತು. ಆದರೆ, ಈ ಮಾಹಿತಿಯನ್ನು ನೀಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತ ಕುಮಾರ್ ನಿರಾಕರಿಸಿದ್ದರು.
ಅಧಿಕಾರಿಯ ಈ ನಿಲುವು ಪ್ರಶ್ನಿಸಿ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಮಾಹಿತಿ ಆಯೋಗವು ಹನುಮಂತ ಕುಮಾರ್‌ಗೆ 15 ಸಾವಿರ ರುಪಾಯಿ ದಂಡ ವಿಧಿಸಿದೆ.
ಆಯುಕ್ತ ಎಸ್.ಎಲ್. ಪಾಟೀಲ್ ಅವರು ಪ್ರತಿವಾದಿಗೆ ಮಾಹಿತಿ ನೀಡದ ಕಾರಣಕ್ಕೆ ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತವನ್ನು ಅವರ ವೇತನದಿಂದ ಪ್ರತಿ ತಿಂಗಳು 5 ಸಾವಿರ ರೂ ನಂತೆ ಕಡಿತಗೊಳಿಸಲು ಆದೇಶಿಸಿದ್ದಾರೆ.
ಹಾಗೆಯೇ ಅರ್ಜಿದಾರರಿಗೆ ಈ ಮಾಹಿತಿ ಒದಗಿಸುವಂತೆಯೂ ಆದೇಶಿಸಿ ಆಯೋಗ ಮೆಲ್ಮನವಿಯನ್ನು ವಿಲೇವಾರಿ ಮಾಡಿದೆ.