ಬೆಂಗಳೂರು: ಬೊಮ್ಮನಹಳ್ಳಿ ವಲಯದ ಸಾರಕ್ಕಿ ಕೆರೆ ಪ್ರದೇಶದ 21.68 ಗುಂಟೆ ಒತ್ತುವರಿಯಾಗಿದ್ದ ಪ್ರದೇಶವನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ದೀಪಶ್ರೀ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ವಶದಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಸರ್ವೆ ಹಾಗೂ ತೆರವುಗೊಳಿಸುವ ಕಾರ್ಯಜಾರಿಯಲ್ಲಿದೆ. ಅದರಂತೆ ಇತ್ತೀಚೆಗೆ ಬೊಮ್ಮನಹಳ್ಳಿ ವಲಯದ ಸಾರಕ್ಕಿ ಕೆರೆ (ಜರಗನಹಳ್ಳಿ ಸರ್ವೆ 7ರ) ಕೆರೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕೆರೆಯ ಸರ್ವೆ ಕಾರ್ಯ ನಡೆಸಿ 21.68 ಗುಂಟೆ ಶೆಡ್ ಖಾಲಿ ಜಾಗ ಹಾಗೂ ರಸ್ತೆಯಿಂದ ಆಕ್ರಮಿತವಾಗಿದ್ದ ಪ್ರದೇಶವು ಒತ್ತುವರಿಯಾಗಿದೆ ಎಂದು ತಿಳಿಸಿತ್ತು.
ಮುಂದುವರಿದು, ನಾವು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಅವರು 21.68 ಗುಂಟೆ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಿ ಈ ಪ್ರದೇಶಕ್ಕೆ ತಂತಿ ಬೇಲಿಯನ್ನು ಅಳವಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಒತ್ತುವರಿ ಪ್ರದೇಶದ ಮಾರುಕಟ್ಟೆ ಮೌಲ್ಯವು ಸುಮಾರು 20 ಕೋಟಿ ರೂ.ಗಳಾಗಲಿದೆ ಎಂದು ಇದೆ ವೇಳೆ ದೀಪಶ್ರೀ ಮಾಹಿತಿ ನೀಡಿದರು.