NEWSಬೆಂಗಳೂರು

ಭಾರಿ ಮಳೆಗೆ ಬಿಬಿಎಂಪಿಯ 63 ಕೆರೆಗಳು ಭರ್ತಿ: ಆಯುಕ್ತೆ ಪ್ರೀತಿ ಗೆಹ್ಲೋಟ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ನೀರಿನ ಮಟ್ಟವು ಗಣನೀಯವಾಗಿ ಹೆಚ್ಚಾಗಿದ್ದು, 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯವು 32,514 ದಶಲಕ್ಷ ಲೀಟರ್‌ ಗಳಾಗಿದೆ. ಕಳೆದ ಏಪ್ರಿಲ್-2025ರಲ್ಲಿ ಕೆರೆಗಳ ಒಟ್ಟು ನೀರಿನ ಸಂಗ್ರಹಣೆಯ ಪ್ರಮಾಣವು 10,595 ದಶಲಕ್ಷ ಲೀಟರ್‌ಗಳಿಗೆ ಕುಸಿದು ಕೇವಲ 3 ಕೆರೆಗಳಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿತ್ತು. ಸುಮಾರು 63 ಕೆರೆಗಳಲ್ಲಿ ನೀರಿಲ್ಲದೆ ಒಣಗುವ ಹಂತದಲ್ಲಿತ್ತು.

ಆದರೆ, ಇದೀಗ ನಗರದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಒಟ್ಟು 26,056 ದಶಲಕ್ಷ ಲೀಟರ್‌ ನಷ್ಟು ನೀರು ಕೆರೆಗಳಲ್ಲಿ ಸಂಗ್ರಹವಾಗಿದ್ದು, ಏಪ್ರಿಲ್-2025ಕ್ಕೆ ಹೋಲಿಸಿದರೆ ನೀರಿನ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ. ಇದೀಗ ಪಾಲಿಕೆ ವ್ಯಾಪ್ತಿಯ 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ.

ತುಂಬಿರುವ ಎಲ್ಲ ಕೆರೆಗಳ ತೂಬುಗಳ ಬಳಿ ಹಾಗೂ ಕೆರೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ. ಕೆರೆಗಳು ನೀರು ಹೋಗುವ ಕಾಲುವೆಗಳಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯವನ್ನು ತೆರವುಗೊಳಿಸಲು ಸಿಬ್ಬಂದಿಗಳನ್ನು ನಿಯೋಜಿಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!