NEWSನಮ್ಮಜಿಲ್ಲೆನಮ್ಮರಾಜ್ಯ

ತಾಳಿ ಕಟ್ಟುವ ಕ್ಷಣ ಹಸಮಣೆಯಲ್ಲೇ ಮದುವೆ ಬೇಡ ಎಂದ ವಧು- ಬೇರೊಬ್ಬ ಹುಡುಗನ ಪ್ರೀತಿ ಮಾಡುತ್ತಿದ್ದೇನೆಂದು ಶಾಕ್‌ ಕೊಟ್ಟಳು!

ವಿಜಯಪಥ ಸಮಗ್ರ ಸುದ್ದಿ

ಹಾಸನ: ರಾತ್ರಿ ಖುಷಿ, ಖುಷಿ ರೆಸೆಪ್ಶನ್ ಆಗಿತ್ತು. ಬೆಳಗ್ಗೆ ಮುಹೂರ್ತಕ್ಕೆ ಸಕಲ ಸಿದ್ಧತೆಯೂ ಜೋರಾಗಿತ್ತು. ಜತೆಗೆ ಹಸೆಮಣೆಯನ್ನೂ ಏರಲಾಗಿತ್ತು. ಇನ್ನೇನು ಒಂದು ನಿಮಿಷದಲ್ಲೇ ತಾಳಿ ಕಟ್ಟಬೇಕಿತ್ತು. ತಾಳಿ ಹಿಡಿದು ವರ ತಾಳಿ ಕಟ್ಟುವುದಕ್ಕೆ ಮುಂದಾದ ಕೂಡಲೇ ವಧು ತಲೆ ಅಲ್ಲಾಡಿಸಿ ಮದುವೆ ಬೇಡ ನಾನು ಬೇರೆ ಹುಡುಗನ ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಮದುವೆ ನಿರಾಕರಿಸಿದ್ದಾಳೆ.

ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಬೇಡ ಎಂದು ವಧು ಎಲ್ಲರಿಗೂ ಶಾಕ್​ ನೀಡಿರುವ ಈ ಘಟನೆ ಶುಕ್ರವಾರ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಹಾಸನ ತಾಲೂಕಿನ, ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಇಂದು ಮದುವೆ ನಿಶ್ಚಯವಾಗಿತ್ತು. ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಸಂಬಂಧಿಕರು ಖುಷಿ ಖುಷಿಯಾಗಿ ಮದುವೆಯಲ್ಲಿ ಓಡಾಡುತ್ತಿದ್ದರು. ಆದ್ರೇ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಯುವತಿಗೆ ಫೋನ್‌ ಕರೆಯೊಂದು ಬಂದಿದೆ.

ಆ ಕೂಡಲೇ ಮದುವೆ ಬೇಡ ಎಂದು ಯುವತಿ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆದ್ರೆ ಯುವತಿ ಹೀಗೆ ಮಾಡಿದಕ್ಕೆ ಕಾರಣ ಆಕೆ ಒಬ್ಬ ಹುಡುಗನ ಪ್ರೀತಿಸುತ್ತಿರುವುದು. ಹೀಗಾಗಿ ತಾಳಿ ಕಟ್ಟಲು ಬಂದ ವರನ ಹತ್ತಿರ ನನಗೆ ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ. ಜತೆಗೆ ಕಣ್ಣೀರು ಹಾಕಿದ್ದಾಳೆ.

ಇನ್ನೂ, ಮದುವೆ ಬೇಡವೇ ಬೇಡ ಎಂದು ಹಠ ಹಿಡಿದ ಯುವತಿಯನ್ನು ನೋಡಿದ ವರ ನನಗೂ ಈ ಸಂಬಂಧ ಬೇಡ ಅಂತ ಹೇಳಿದ್ದಾರೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಕಣ್ಣೀರಿಟ್ಟಿದ್ದಾರೆ. ಆಗ ಬಡಾವಣೆ ಹಾಗೂ ನಗರ ಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ವಿವಿಧ ವಿಧವಾಗಿ ಮದುವೆ ಆಗುವಂತೆ ಸಲಹೆ ನೀಡಿದ್ದಾರೆ. ಆದರೆ ಯುವತಿ ಮಾತ್ರ ತನ್ನ ಹಠವನ್ನು ಬಿಡಲಿಲ್ಲ.

ಹೀಗಾಗಿ ಕೊನೆಗೆ ಪೊಲೀಸರು ವಧು-ವರನ ಕಡೆಯ ಹಿರಿಯರನ್ನು ಕರೆದು ನೀವು ಒಂದು ತೀರ್ಮಾನ ಮಾಡಿಕೊಳ್ಳಿ. ಎರಡು ಕುಟುಂಬಕ್ಕೂ ಖರ್ಚಾಗಿದೆ. ಹೀಗಾಗಿ ಆ ಖರ್ಚನ್ನು ಇಬ್ಬರು ಸಮಾನವಾಗಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಎರಡು ಕುಟುಂಬಗಳು ಬಹುತೇಕ ಒಪ್ಪಿಕೊಂಡಿವೆ ಎಂದು ಹೇಳಲಾಗುತ್ತಿದೆ.

ಇನ್ನು ವಧುವಿನ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ಸೌಮ್ಯ ಸ್ವಭಾವದ  ವ್ಯಕ್ತಿಯಾಗಿದ್ದಾರೆ. ಪಾಲಕರಿಗೆ ತಿಳಿಸದೆ ಪ್ರೀತಿ ಮಾಡಿದ ಯುವತಿ ತಾನು ಪ್ರೀತಿ ಮಾಡಿದ ಯುವಕ ಬಗ್ಗೆ ಹೇಳಿಕೊಂಡಿದ್ದರೆ ಈ ಮಧುವೆ ಈ ರೀತಿ ಕೊನೆ ಕ್ಷಣದಲ್ಲಿ ನಿಲ್ಲುತ್ತಿರಲಿಲ್ಲ ಎಂದು ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Megha
the authorMegha

Leave a Reply

error: Content is protected !!