ನ್ಯೂಡೆಲ್ಲಿ: ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಗುಲಾಂ ನಬಿ ಅಜಾದ್, ಕಪಿಲ್ ಸಿಬಲ್ ಸೇರಿ 23 ಹಿರಿಯ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ವಿಚಾರ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರ್ಯ ಸಮಿತಿ ಸಭೆಯಲ್ಲಿ(ಸಿಡಬ್ಲ್ಯುಸಿ) ಬಹಳಷ್ಟು ಚರ್ಚೆಯಾಗಿದೆ.
ಸುಮಾರು ಏಳು ಗಂಟೆಗಳು ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಅಂತಿಮವಾಗಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿದ್ದು, ಆರು ತಿಂಗಳಲ್ಲಿ ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಹೀಗಾಗಿ ಮುಂದಿನ ಸಿಡಬ್ಲ್ಯುಸಿ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಸೋನಿಯಾ ಅವರೇ ಹಂಗಾಮಿಯಾಗಿ ಮುಂದುವರಿಯಲಿದ್ದಾರೆ.
ಕಾಂಗ್ರೆಸ್ ದೊಡ್ಡ ಕುಟುಂಬವಿದ್ದಂತೆ. ತನಗೆ ಯಾರ ವಿರುದ್ಧವೂ ದ್ವೇಷ ಇಲ್ಲ. ಆದರೆ, ಪಕ್ಷದ ವೇದಿಕೆಯಲ್ಲಿ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿ ಎಂದು ಹಿರಿಯ ನಾಯಕರಿಗೆ ಸಭೆಯಲ್ಲಿ ಸೋನಿಯಾ ಗಾಂಧಿ ಸಲಹೆ ನೀಡಿದ್ದಾರೆ.
ತಾವು ಹಂಗಾಮಿ ಅಧ್ಯಕ್ಷೆ ಹುದ್ದೆ ತೊರೆಯಲಿದ್ದು, ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಇಂದು ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಕೇಳಿಕೊಂಡರು.
ಆದರೆ ಆರು ತಿಂಗಳ ವರೆಗೆ ನೀವೆ ಮುಂದುವರಿಯಬೇಕು ಎಂದು ಸಭೆಯಲ್ಲಿದ್ದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮನವಿ ಮಾಡಿದರು. ಎ.ಕೆ. ಆಂಟನಿ ಕೆಲವು ನಾಯಕರು ಪತ್ರ ಬರೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಗುಲಾಂ ನಬಿ ಅಜಾದ್, ಚಿದಂಬರಂ ಸೇರಿ ಹಲವರು ಭಾಗವಹಿಸಿದ್ದರು.