ಹಾವೇರಿ: ರಾಜ್ಯದ ಕಬ್ಬು ಬೆಳೆಗಾರರ ಬಾಕಿ ಮೊತ್ತವನ್ನು ಇದೇ ಸೆಪ್ಟೆಂಬರ್ 10ರೊಳಗೆ ಪಾವತಿ ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವರಾದ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆ ಮಾಡಿದ ರೈತರಿಗೆ ಶೇ.98.89 ರಷ್ಟು ಹಣ ಪಾವತಿ ಮಾಡಿದ್ದಾರೆ. ಕಾರ್ಖಾನೆಗಳು ರೂ.10,936 ಕೋಟಿ ಮೊತ್ತದ ಕಬ್ಬನ್ನು ನುರಿಸಿದ್ದು, ಈ ಪೈಕಿ ರೂ. 10,810ಕೋಟಿ ಹಣವನ್ನು ರೈತರಿಗೆ ಪಾವತಿಸಲಾಗಿದೆ. ರೂ.126 ಕೋಟಿ ಉಳಿದ ಹಣವನ್ನು ಶೀಘ್ರವೇ ಪಾವತಿ ಮಾಡಲಾಗುವುದು. ಬಾಕಿ ಹಣ ಪಾವತಿ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕೋವಿಡ್ ಸಂಕಷ್ಟ ಕಾಲದಲ್ಲೂ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಹಾಗೂ ಅಡಿಕೆ ಬೆಳೆಗಾರರಿಗೆ ಹೆಚ್ಚು ತೊಂದರೆಯಾಗಿಲ್ಲ. ಸಂಕಷ್ಟ ಕಾಲದಲ್ಲೂ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬುಪೂರೈಕೆಮಾಡಿದವರಿಗೆ ಹಣ ಸಂದಾಯ ಮಾಡಿದ್ದಾರೆ. ಕಾರ್ಖಾನೆ ಮಾಲೀಕರಿಗೆ ಅಭಿನಂದಿಸುವೆ. ಈವರೆಗೆ ಕಬ್ಬು ಬೆಳೆಗಾರರಿಗೆ ಹಣ ಸಂದಾಯ ಮಾಡದ ಕಾರ್ಖಾನೆಗಳು ಯಾವುದಾದರೂ ಇದ್ದರೆ ಕಾರ್ಖಾನೆಯ ಸಕ್ಕರೆ ಮಾರಾಟ ಮಾಡಿ ರೈತರಿಗೆ ಹಣ ಪಾವತಿಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಕಬ್ಬು ಪೂರೈಕೆಮಾಡಿದ 15ದಿನದೊಳಗಾಗಿ ರೈತರಿಗೆ ಹಣ ಪಾವತಿಸುವಂತೆ ಕೇಂದ್ರ ಸರ್ಕಾರದ ನಿರ್ದೇಶನವಿದೆ ಹಾಗೂ ಉತ್ಪಾದನೆಯಾದ ಸಕ್ಕರೆ ಯನ್ನು ಕೇಂದ್ರ ನಿಗದಿಪಡಿಸಿದ ಪ್ರಮಾಣದಲ್ಲಿ ಆಯಾ ತಿಂಗಳು ಮಾರಾಟ ಮಾಡುವ ನಿರ್ಬಂಧವನ್ನು ಸಕ್ಕರೆ ಕಾರ್ಖಾನೆಗಳಿಗೆ ವಿಧಿಸಲಾಗಿದೆ ಎಂದು ತಿಳಿಸಿದರು.
ಸಂಗೂರ ಸಕ್ಕರೆ ಕಾರ್ಖಾನೆಯ ಉತ್ಪಾದನೆ ಹಾಗೂ ಕಬ್ಬು ಪೂರೈಕೆ ಕುರಿತಂತೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು 2019-20ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮನ್ನು ದಿನಾಂಕ 04-10-2019 ರಂದು ಆರಂಭಿಸಿ 18-2-2020ರವರೆಗೆ ಮುಕ್ತಾಯಗೊಳಿಸಿರುತ್ತಾರೆ. ಸದರಿ ಸಾಲಿನಲ್ಲಿ 4,29,013.828 ಮೆಟ್ರಿಕ್ ಟನ್ ಕಬ್ಬನ್ನು ನುರಿಸಿದ್ದು 41410.80 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದ್ದಾರೆ.
9.65 ಇಳುವರಿ ಬಂದಿರುತ್ತದೆ. ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆದೇಶದಂತೆ ಪ್ರತಿ ಮೆಟ್ರಿಕ್ ಟನ್‍ಗೆ ಎಫ್.ಆರ್.ಪಿ. ದರ ರೂ.2613 ನಿಗದಿಮಾಡಲಾಗಿದೆ. ಈ ದರದಂತೆ ಪೂರೈಕೆಯಾದ ಕಬ್ಬಿಗೆ 11210.13 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಆದರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ಪ್ರತಿ ಮೆಟ್ರಿಕ್ ಟನ್‍ಗೆ 2694.38 ರಂತೆ ರೂ.11559.26 ಲಕ್ಷ ಮೊತ್ತವನ್ನು ರೈತರ ಕಬ್ಬಿನ ಬಿಲ್ ಪಾವತಿಸಿರುತ್ತಾರೆ. ಎಫ್.ಆರ್.ಪಿ. ದರದಕ್ಕಿಂತ ರೂ.349.13 ಲಕ್ಷ ಹೆಚ್ಚುವರಿಯಾಗಿ ರೈತರಿಗೆ ಹಣ ಸಂದಾಯವಾಗಿರುತ್ತದೆ. ಯಾವುದೇ ಕಬ್ಬಿನ ಬಿಲ್ ಬಾಕಿ ಇರುವುದಿಲ್ಲ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ,ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂದಿಹಟ್ಟಿ, ಸಹಾಯಕ ಕಾರ್ಮಿಕ ಆಯುಕ್ತರಾದ ಮೀನಾ ಪಾಟೀಲ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಲಲಿತಾ ಸಾತೇನಹಳ್ಳಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.