ಮೈಸೂರು: ಕೊರೊನಾ ಸೋಂಕು ನಿವಾರಣೆ ಹಿನ್ನೆಲೆಯಲ್ಲಿ ಆಕ್ಸ್ಫರ್ಡ್ ಸಂಶೋಧಿಸಿರುವ ‘ಕೋವಿಶೀಲ್ಡ್’ ಲಸಿಕೆಯ ಎರಡನೇ ಹಂತದ ಪ್ರಯೋಗ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಆರಂಭವಾಗಿದ್ದು, ಐವರು ಸ್ವಯಂ ಸೇವಕರಿಗೆ ಲಸಿಕೆ ಹಾಕಲಾಗಿದೆ.
ಸದ್ಯ ಲಸಿಕೆ ಪಡೆದ ನಂತರ ಆ ಐವರಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಮತ್ತು ರಿಯಾಕ್ಷನ್ ಸಹ ಆಗಿಲ್ಲ. ಹೀಗಾಗಿ ಲಸಿಕೆ ಮತ್ತೊಂದು ಹಂತದ ಸಕ್ಸಸ್ ಕಂಡಿದೆ ಎನ್ನಬಹದು.
ಕೊರೊನಾಗೆ ಕಂಡು ಹಿಡಿದ ಲಸಿಕೆಯ ಮೊದಲ ಮಾನವ ಪ್ರಯೋಗ ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಜೆಎಸ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಸಿಕೆ ಪ್ರಯೋಗ ಮಾಡಲಾಗುತ್ತಿದ್ದು ಡಿಸೆಂಬರ್ ಅಂತ್ಯಕ್ಕೆ ಪ್ರಯೋಗದ ಫಲಿತಾಂಶ ಬರಲಿದೆ ಎಂದು ಜೆ ಎಸ್ ಎಸ್ ಅಕಾಡೆಮಿಕ್ ಸಮಕುಲಾಧಿಪತಿ ಬಿ. ಸುರೇಶ್ ಸುದ್ದಿಗಾರರಿಗೆ ತಿಳಿಸಿದರು.
ಪುಣೆಯ ಸೆರಂ ಇನ್ ಸ್ಟಿಟ್ಯೂಟ್ ನಿಂದ ಈ ಲಸಿಕೆ ಬಂದಿದ್ದು ನೋಂದಾಯಿತ ಸ್ವಯಂ ಸೇವಕರ ಮೇಲೆ ಮೊದಲ ಪ್ರಯೋಗ ನಡೆಸಲಾಗುತ್ತದೆ. ಒಟ್ಟಾರೇ 250 ಜನರ ಮೇಲೆ ಆಕ್ಸ್ ಫರ್ಡ್ ಕೋವಿಶೀಲ್ಡ್ ಲಸಿಕೆಯನ್ನ ಪ್ರಯೋಗ ಮಾಡಲಾಗುತ್ತದೆ ಎಂದು ಬಿ. ಸುರೇಶ್ ವಿವರಿಸಿದರು.