ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಂಡು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಬಳಿಕ ಇದೇ ಮೊದಲ ಬಾರಿಗೆ ಮಹತ್ವದ ರಾಜಕೀಯ ಬೆಳವಣಿಕೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅನುದಾನ ಹಂಚಿಕೆ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಳದೆರಡು ದಿನದಿಂದ ಬೆಂಗಳೂರಿನಲ್ಲಿ ಸಾಕಷ್ಟು ಮಳೆ ಆಗುತ್ತಿದ್ದು, ಪಕ್ಷದ ಶಾಸಕ ಮಂಜುನಾಥ್ ದಾಸರಹಳ್ಳಿ ಅವರ ಕ್ಷೇತ್ರದಲ್ಲಿಯೂ ತುಂಬ ಹಾನಿ ಆಗಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗ 515 ಕೋಟಿ ರೂ. ಯೋಜನೆಗೆ ಅನುಮೋದನೆ ಕೊಟ್ಟಿದ್ದೆ.ಆದರೆ ಈಗಿನ ಸರ್ಕಾರ ಕೇವಲ 16 ಕೋಟಿ ರೂ. ಮಾತ್ರ ನೀಡಿದೆ. ಹೀಗಾಗಿ ಮಳೆ ಅನಾಹುತ ನಿರ್ವಹಣೆ ಅಗತ್ಯ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಸಿಎಂ ಬಿಎಸ್ವೈ ಮಾತನಾಡಿ, ಜೆಡಿಎಸ್ ಶಾಸಕ ಮಂಜುನಾಥ್ ದಾಸರಹಳ್ಳಿ ಅವರ ಕ್ಷೇತ್ರದಲ್ಲಿ ಮಳೆಯಿಂದ ತುಂಬ ಹಾನಿ ಆಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಹಣ ಸಾಲದು. ಹೀಗಾಗಿ ಮಳೆ ಅನಾಹುತ ನಿರ್ವಹಣೆ ಇನ್ನಷ್ಟು ಅಗತ್ಯ ನೆರವು ನೀಡುವಂತೆ ಎಚ್ಡಿಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಎಚ್ಡಿಕೆ ಮತ್ತ ತಮ್ಮ ಭೇಟಿಬಗ್ಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಅವರು ಮಳೆಯಿಂದ ಆಗಿರುವ ಹಾನಿಗೆ ಸೂಕ್ತ ನೆರವು ನೀಡುವಂತೆ ಕೇಳಲು ಬಂದಿದ್ದರಷ್ಟೆ ಎಂದು ವಿವರಿಸಿದರು.