ಬೆಂಗಳೂರು: ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ನಗರದ ವಿವಿಧೆಡೆ ಸಂಚರಿಸಿ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಚೇನಹಳ್ಳಿ, ಮಾನ್ಯತಾ ಟೆಕ್‍ಪಾರ್ಕ್ ಸಮೀಪ ಸಂಭವಿಸಿದ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಕಾಲುವೆ ಹೂಳೆತ್ತುವ ಕಾರ್ಯ, ಒಳಚರಂಡಿ ಪರಿಸ್ಥಿತಿಯನ್ನು ಪರಾಮರ್ಶಿಸುವ ಮೂಲಕ ಮೊದಲ ದಿನವೇ ಫೀಲ್ಡ್ ಗಿಳಿದಿದ್ದಾರೆ.
ಗೆದ್ದಲಹಳ್ಳಿ ಸಮೀಪ ರಸ್ತೆಗಳು ಸರಿಯಿಲ್ಲದಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗುಂಡಿಬಿದ್ದ ರಸ್ತೆಗಳು, ಹಾಳಾದ ರಸ್ತೆಗಳನ್ನು ಕಂಡು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗೌರವ್‍ಗುಪ್ತ ಇಷ್ಟು ವರ್ಷದಿಂದ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದೀರಾ ಒಂದು ರಸ್ತೆ ಸರಿಯಾಗಿ ನಿರ್ಮಾಣ ಮಾಡೋದಕ್ಕೆ ಆಗೋದಿಲ್ವಾ ಎಂದು ತರಾಟೆಗೆ ತೆಗೆದುಕೊಂಡರು.
ಇನ್ನು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಗೌರವ್ ಗುಪ್ತ ಅವರಿಗೆ ಪತ್ರ ಬರೆದಿದ್ದು ರಸ್ತೆ ದುರಸ್ತಿ ಬಗ್ಗೆ ವಿವರಿಸಿದ್ದಾರೆ, ಮಳೆಯಿಂದಾಗಿ ಚಿಕ್ಕಪೇಟೆ ರಸ್ತೆಗಳು ತೀರಾ ಹಾನಿಗೊಳಗಾಗಿವೆ, ಜತೆಗೆ ಬಿಡಬ್ಲ್ಯುಎಸ್ ಎಸ್ ಬಿ ಯವರು ಕೂಡ ರಸ್ತೆ ಅಗೆದಿದ್ದು ಅಲ್ಲಿನ ಜನರು ತುಂಬಾ ತೊಂದರೆ ಅನುಭವಿಸುವಂತಾಗಿದೆ ಹೀಗಾಗಿ, ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ ಬಳಿಯ ಹೆಬ್ಬಾಳ ವ್ಯಾಲಿ(ನಾಲೆ) ತಪಾಸಣೆ
ಭಾರಿ ಮಳೆಯಿಂದ ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗಿತ್ತು. ಈ ಸಂಬಂಧ ಇಂದು ಆಡಳಿತಗಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರು ಪ್ರಹ್ಲಾದ್ ಪ್ರತಿಕ್ರಿಯಿಸಿ, ಮಾನ್ಯತಾ ಟೆಕ್ ಪಾರ್ಕ್ ಬಳಿ ಹೆಬ್ಬಾಳ ಕೆರೆ ಹಾಗೂ ರಾಚೇನಹಳ್ಳಿ ಕೆರೆಯ ನೀರು ಹೆಬ್ಬಾಳ ವ್ಯಾಲಿ ಮೂಲಕ ಹೋಗುತ್ತದೆ. ಮಳೆ ಹೆಚ್ಚು ಸುರಿದ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಉಂಟಾಗುತ್ತದೆ. ಅಲ್ಲದೆ ನಾಲೆಯ ಮೇಲೆ ಮೇಲ್ಛಾವಣಿ ಅಳವಡಿಸಿದ್ದು, ಹೂಳು ತೆಗೆಯಲು ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.
ಮಾನ್ಯತಾ ಟೆಕ್ ಪಾರ್ಕ್ ಬಳಿ ನಾಲೆ ಮೇಲೆ ಎಂಬೆಸ್ಸಿ ಗ್ರೂಫ್ ನವರು ಅಳವಡಿಸಿರುವ ಮೇಲ್ಚಾವಣಿಯನ್ನು ಎಂಬೆಸ್ಸಿ ಗ್ರೂಫ್ ನವರೇ ಸೂಕ್ತವಾಗಿ ಮತ್ತು ತಾಂತ್ರಿಕವಾಗಿ ತೆರವುಗೊಳಿಸಲು ಮರುವಿನ್ಯಾಸಗೊಳಿಸಬೇಕು. ಅದಕ್ಕಾಗಿ ಎಂಬೆಸ್ಸಿಯವರು ಒಂದು ವಾರದಲ್ಲಿ ಕ್ರಿಯಾಯೋಜನೆ ರೂಪಿಸಲು ಆಡಳಿತಾಧಿಕಾರಿ ರವರು ತಿಳಿಸಿದರು. ಒಂದು ವೇಳೆ ಎಂಬೆಸ್ಸಿಯವರು ನಾಲೆಯ ಮೇಲಿನ ಮೇಲ್ಚಾವಣಿ ತೆರವುಗೊಳಿಸಿ ಮರುವಿನ್ಯಾಸಗೊಳಿಸದಿದ್ದರೆ, ಪಾಲಿಕೆಯಿಂದಲೇ ಮೇಲ್ಛಾವಣಿ ತೆರವುಗೊಳಿಸಿ ಮರುವಿನ್ಯಾಸಗೊಳಿಸಿ ಅದಕ್ಕೆ ತಗಲುವ ಮೊತ್ತದ ದುಪ್ಪಟ್ಟು ದಂಡವನ್ನು ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಹ ಉಂಟಾಗುವ ಸ್ಥಳಗಳನ್ನು ಮೊದಲೇ ಗುರುತಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಎಲ್ಲಿಯೂ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆಯಲ್ಲಿ Water Level ಕೆಳಗಿಳಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜವಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ ತಪಾಸಣೆ
ಜವಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಬಳಿ ಮಳೆಯಾದರೆ ತುಂಬಾ ಜಲಾವೃತವಾಗುತ್ತದೆ. 2-3 ಗಂಟೆಗಳ ಕಾಲ ಮಳೆ ನೀರು ರಸ್ತೆ ಮೇಲೆ ನಿಂತಿರುತ್ತದೆ. ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಡಳಿತಗಾರರಿಗೆ ತಿಳಿಸಿದರು. ಆಡಳಿತಗಾರರು ಮಾತನಾಡಿ, ಕೂಡಲೆ ಜಲಮಂಡಳಿ, ಕೆರೆ, ರಾಜಕಾಲುವೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮನ್ವಯತೆಯಿಂದ ಪರಿಹಾರ ಕಂಡುಕೊಳ್ಳಬೇಕು. ತ್ವರಿತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ರಾಚೇನಹಳ್ಳಿ ಕೆರೆ ತಪಾಸಣೆ
ರಾಚೇನಹಳ್ಳಿ ಕೆರೆಗೆ ಮಳೆ ನೀರು ಸೇರುವ(Inlet) ಕಾಲುವೆ ತಪಾಸಣೆ ನಡೆಸಿ, ಮಳೆ ನೀರು ಕೆರೆಗೆ ಸೇರುವ ಕಾಲುವೆ ಚಿಕ್ಕದಾಗಿರುವ ಪರಿಣಾಮ ಸಮಸ್ಯೆ ಉಂಟಾಗಿದೆ. ಜೊತೆಗೆ ಸುಮಾರು 650 ಮೀಟರ್ ಡೈವರ್ಷನ್ ಲೈನ್ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಮುಖ್ಯ ಅಭಿಯಂತರರು(ಕೆರೆಗಳು) ರವರು ತಿಳಿಸಿದರು. ಅದಕ್ಕೆ ಆಡಳಿತಗಾರರು ಪ್ರತಿಕ್ರಿಯಿಸಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಾವೃತವಾಗದಂತೆ ನೋಡಿಕೊಳ್ಳಬೇಕು. ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಿ ಇರುವ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದರು.
ರಾಷ್ಟ್ರೋತ್ಥಾನ ಜಂಕ್ಷನ್ ನಲ್ಲಿ ಗ್ರೇಡ್ ಸೆಪರೇಟರ್ ತಪಾಸಣೆ
ಹೆಗ್ಡೆನಗರ ರಾಷ್ಟ್ರೋತ್ಥಾನ ಜಂಕ್ಷನ್ ನಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿ ತಪಾಸಣೆ ನಡೆಸಿದ ಆಡಳಿತಗಾರರು, ಸುತ್ತಮುತ್ತಲಿನ ಡೆಬ್ರಿಸ್ ಅನ್ನು ಕೂಡಲೆ ತೆರವುಗೊಳಿಸಿ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಣ್ಣೂರು ರೈಲ್ವೆ ಬ್ರಿಡ್ಜ್ ಬಳಿ ರಾಜಕಾಲುವೆ(SWD) ಕಾಮಗಾರಿ ತಪಾಸಣೆ
ಹೆಣ್ಣೂರು ರೈಲ್ವೆ ಬ್ರಿಡ್ಜ್ ಬಳಿ ರಾಜಕಾಲುವೆ(SWD)ಯಲ್ಲಿ ಜೋರು ಮಳೆಯಾದ ವೇಳೆ ರಸ್ತೆ ಮೇಲೆ ನೀರು ಹರಿದು ವಾಹನ ಸವಾರ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಆದ್ದರಿಂದ ರಾಜಕಾಲುವೆ ವಿಭಾಗದಿಂದ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ರೈಲ್ವೆ ಹಳಿ ಕೆಳಗೆ ಎರಡು ಸೇತುವೆ ನಿರ್ಮಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರು ತಿಳಿಸಿದರು. ಈ ವೇಳೆ ಆಡಳಿತಗಾರರು ಸ್ಥಳದಲ್ಲೇ ವಿಭಾಗೀಯ ರೈಲ್ವೆ ಮುಖ್ಯಸ್ಥರ(Divisional Railway Manager) ಜೊತೆ ದೂರವಾಣಿ ಮೂಲಕ ಮಾತನಾಡಿ, ರೈಲ್ವೆ ಹಳಿ ಕೆಳಗೆ ಎರಡು ಸೇತುವೆ ನಿರ್ಮಾಣ ಮಾಡಿಕೊಡಲು ಸೂಚಿಸಿದರು.