ಚಂಡೀಗಢ: ಕೇಂದ್ರ ಸರ್ಕಾರದ ತಿದ್ದಪಡಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 70 ವರ್ಷದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ ರಾಜ್ಯದ ಮುಕ್ತಸರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಮುಕ್ತಸರ್ ಜಿಲ್ಲೆಯ ಅಕ್ಕನ್ ವಾಲಿ ಗ್ರಾಮದ ಪ್ರೀತಂ ಸಿಂಗ್ ಎಂಬ ರೈತ ವಸೂದೆ ವಿರುದ್ಧ ಆಕ್ರೋಶಗೊಂಡ ಶುಕ್ರವಾರ ಬೆಳಗ್ಗೆ ವಿಷ ಸೇವಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಪಂಜಾಬ್‌ನ ಬಾದಲ್ ಗ್ರಾಮದಲ್ಲಿ ಭಾರತೀಯ ಕಿಸಾನ್ ಒಕ್ಕೂಟ ಆಯೋಜಿಸಿರುವ ಕೇಂದ್ರ ಸರ್ಕಾರದ ಹೊಸ ಸುಧಾರಿತ ಕೃಷಿ ಮಸೂದೆ ವಿರೋಧಿ ಪ್ರತಿಭಟನೆಯಲ್ಲಿ ಪ್ರೀತಂ ಸಿಂಗ್ ಸೆಪ್ಟೆಂಬರ್ 15ರಿಂದ ಭಾಗವಹಿಸಿದ್ದರು. ಆದರೆ ಆತ್ಮಹತ್ಯೆಯ ಏಕೆ ಮಾಡಿಕೊಂಡಿದ್ದಾರೆ ಎಂಬ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಅವರು ತುಂಬ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ನಡುವೆ ಮೃತ ವೃದ್ಧರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಬಿಕೆಯು ಪ್ರಧಾನ ಕಾರ್ಯದರ್ಶಿ ಸುಖ್ ದೇವ್ ಸಿಂಗ್ ಆಗ್ರಹಿಸಿದ್ದಾರೆ.