ಮೈಸೂರು: ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ಗಳೆಂದು ಪರಿಗಣಿಸುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಸಚಿವರಿಗೆ ಮನವಿ ಪತ್ರ ನೀಡಿದ್ದು, ಜಾಗತಿಕ ಮಹಾಮಾರಿ ಕೊರೊನಾದಿಂದ ಎಲ್ಲ ಕಡೆಗಳಲ್ಲೂ ಸಂಕಷ್ಟ ಎದುರಾಗಿದೆ. ಇದಕ್ಕೆ ಮಾಧ್ಯಮದವರು ಹೊರತಾಗಿಲ್ಲ. ಮಾಧ್ಯಮ ಸಂಸ್ಥೆಗಳು ಈಗಾಗಲೇ ನಷ್ಟದಲ್ಲಿ ಸಿಲುಕಿರುವ ಪರಿಣಾಮ, ನೇರವಾಗಿ ಪತ್ರಕರ್ತರ ಮೇಲೆ ಬೀಳುತ್ತಿದೆ.
ವೈದ್ಯರು, ಪೊಲೀಸರು ಹಾಗೂ ಪೌರಕಾರ್ಮಿಕರಂತೆ ಮಾಧ್ಯಮದವರು ಎಂತಹುದೇ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ನಮ್ಮನ್ನು ಕೊರೊನಾ ವಾರಿಯರ್ಸ್ಗಳೆಂದು ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.
ಕೊರೊನಾದಿಂದ ಕೆಲ ಪತ್ರಕರ್ತರು ಸಾವಿಗೀಡಾಗಿದ್ದಾರೆ. ಕೆಲವು ಕಡೆಗಳಲ್ಲಿ ಸರ್ಕಾರ ಹಾಗೂ ಜನರ ಸ್ಪಂದನೆ ಉತ್ತಮವಾಗಿದ್ದು, ಬಹುಪಾಲು ಕಡೆಗಳಲ್ಲಿ ವೃತ್ತಿ ನಿರತ ಪತ್ರಕರ್ತರು ತೀರಾ ತೊಂದರೆಗೆ ಸಿಲುಕಿದ್ದಾರೆ. ಇಂತಹ ವೇಳೆ ಸರ್ಕಾರ ನಮ್ಮ ಸಹಾಯಕ್ಕೆ ಬರುತ್ತದೆ ಎಂದು ನಂಬಿಕೊಂಡಿದ್ದೇವೆ.
ವೃತ್ತಿ ನಿರತ ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ ಎಂದು ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಮಾಡಬೇಕು. ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವ ಪತ್ರಕರ್ತರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸುವಂತೆ ತಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಅದು ಜಾರಿಗೆ ಬರುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ.