ಮೈಸೂರು: ಈ ಬಾರಿ ಸರಳ ದಸರಾ ಮಹೋತ್ಸವ ಆಚರಣೆಗೆ ಸರ್ಕಾರ ನಿರ್ಧಿಸಿದ್ದು, ಈ ಹಿನ್ನೆಲೆಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಯ್ಕೆ ಯಾಗಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಅ.1ಕ್ಕೆ ಮೈಸೂರಿನ ಅಶೋಕಪುರಂನ ಅರಣ್ಯ ಭವನಕ್ಕೆ, ಮರುದಿನ (ಅ.2) ಬೆಳಗ್ಗೆ ಅರಮನೆ ಅಂಗಳವನ್ನು ಪ್ರವೇಶಿಸಲಿದೆ.
ಅ.2ರಂದು ಬೆಳಗ್ಗೆ ಸಂಪ್ರದಾಯ ದಂತೆ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಅಭಿಮನ್ಯು ನೇತೃತ್ವದ ಗಜಪಡೆಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಲಾರಿಯಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆಗೆ ಕರೆತರಲಾಗುತ್ತದೆ. ಅಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಡೆಯನ್ನು ಅರಮನೆಗೆ ಬರಮಾಡಿ ಕೊಳ್ಳಲಿದೆ. ಅರಮನೆ ಆಡಳಿತ ಮಂಡಳಿಗೆ ಆನೆಗಳ ಜವಾಬ್ದಾರಿ ನೀಡಲಾಗುತ್ತದೆ.
ಇನ್ನು ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಸರಳ ದಸರಾ ಆಚರಣೆಗೆ ನಿರ್ಧರಿಸಲಾಗಿದ್ದು, ಜಂಜೂ ಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಕೇವಲ 5 ಆನೆಗಳನ್ನಷ್ಟೇ ಆಯ್ಕೆ ಮಾಡಿದ್ದು, ಅವುಗಳಲ್ಲಿ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು(53)ವಿಗೆ ನೀಡಲು ನಿರ್ಧರಿಸಲಾಗಿದೆ.
ಆನೆಕಾಡು ಕ್ಯಾಂಪ್‍ನಲ್ಲಿರುವ ಪಟ್ಟದ ಆನೆ ವಿಕ್ರಮ, ಕುಮ್ಕಿ ಆನೆ ವಿಜಯ, ದುಬಾರೆ ಕ್ಯಾಂಪ್‍ನಲ್ಲಿರುವ ಗೋಪಿ ಹಾಗೂ ಮತ್ತೊಂದು ಕುಮ್ಕಿ ಆನೆ ಕಾವೇರಿ ಈ ಬಾರಿಯ ದಸರಾದಲ್ಲಿ ಭಾಗವಹಿಸಲಿವೆ. ಹೀಗಾಗಿ ಈ ಬಾರಿ ಜಂಜೂಸವಾರಿಗೆ ಇನ್ನು 25 ದಿನ ಇರುವಂತೆಯೇ ಗಜಪಡೆಗಳು ಅರಮನೆ ಅಂಗಳವನ್ನು ಪ್ರವೇಶಿಸಲಿವೆ.