ಬೆಂಗಳೂರು: ರಾಜಕಾರಣಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬರುವುದು ಸಹಜ. ಯಾರ ಕುಟುಂಬದಲ್ಲಿ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಿಲ್ಲ ಹೇಳಿ?. ಭ್ರಷ್ಟಾಚಾರ ವಿಷಯಗಳ ತಾರ್ಕಿಕ ಅಂತ್ಯ ಎಲ್ಲಿಗೆ ಹೋಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಕುರಿತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವಿಧಾನಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೇಳಿಕೆ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗುತ್ತಿದೆ.
ಸದನದಲ್ಲಿ ನೆರೆ ಹಾವಳಿ, ಕೋವಿಡ್ನಿಂದ ಎದುರಾಗಿರುವ ಕೆಟ್ಟ ಪರಿಸ್ಥಿತಿಯನ್ನು ಎಲ್ಲಾ ಜನಪ್ರತಿನಿಧಿಗಳು ಜತೆಯಾಗಿ ಎದುರಿಸಬೇಕಿದೆ. ಭೂ ಸುಧಾರಣಾ ಕಾಯ್ದೆ ಬಗ್ಗೆ ಚರ್ಚೆ ಮಾಡಬೇಕಿತ್ತು. ಸರ್ಕಾರ ಏನೇ ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಸರಿಯಲ್ಲ. ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಅವಶ್ಯಕತೆ ಏನಿತ್ತು ಎಂದು ಹೇಳುವ ಮೂಲಕ ಯಡಿಯೂರಪ್ಪ ಕುಟುಂಬದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಕುರಿತು ಕೇಳಿದ ಪ್ರಶ್ನೆಗೆ ವಿಷಯಾಂತರ ಮಾಡಿದರು.
ಇನ್ನು ಅವಿಶ್ವಾಸ ನಿರ್ಣಯ ವಿಚಾರದ ಬಗ್ಗೆ ಜೆಡಿಎಸ್ ಈಗಲೇ ಏನು ಮಾತನಾಡುವುದಿಲ್ಲ. ಸಂದರ್ಭ ಬಂದಾಗ ಯೋಚಿಸುತ್ತೇನೆ. ನನ್ನ ವಿಶ್ವಾಸಕ್ಕಿಂತ ರಾಜ್ಯದ ಜನತೆಯ ವಿಶ್ವಾಸ ಮುಖ್ಯವಾಗಿದ್ದು, ಕೊರೊನಾ ಸಂಕಷ್ಟ ಇರುವಾಗ ನಾವೆಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಬೇಕಾದ ಸಂದರ್ಭದಲ್ಲಿ ಗೊಂದಲ ಮೂಡಿಸುವ ನಡೆಗಳು ಏಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಕೇವಲ ಪ್ರಚಾರಕ್ಕಾಗಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರ ಮಂಡಿಸಿರಬಹುದು. ನಮ್ಮ ಪಕ್ಷ ಈ ಕುರಿತು ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದರು.
ಜಿಲ್ಲಾಕೇಂದ್ರಗಳಲ್ಲೂ ಪ್ರತಿಭಟನೆ
ಎಪಿಎಂಸಿ ಮತ್ತು ಭೂಸುಧಾರಣೆ ಈ ಎರಡೂ ಕಾಯ್ದೆಗಳನ್ನು ವಿರೋಧಿಸಿ ಜೆಡಿಎಸ್ ಎಲ್ಲಾ ಜಿಲ್ಲಾಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಿದೆ. ಆದರೆ ತಾವು ಶಸ್ತ್ರ ತ್ಯಾಗ ಮಾಡಿಲ್ಲ. ಈ ಕಾಯ್ದೆಯಲ್ಲಿರುವ ಸಾಧಕ-ಬಾಧಕಗಳ ಬಗ್ಗೆ ರೈತರು, ಶಾಸಕರ ಜತೆ ಚರ್ಚೆ ಮಾಡಬೇಕಾಗಿತ್ತು. ಇದರಿಂದ ರೈತರಿಗೆ ಯಾವ ರೀತಿ ಅನುಕೂಲವಾಗುತ್ತದೆ. ಯಾವ ಉದ್ದೇಶಕ್ಕಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎಂಬುದರ ಮೇಲೆ ಸರ್ಕಾರ ಬೆಳಕು ಚೆಲ್ಲಬೇಕಾಗಿತ್ತು. ಆದರೆ ಯಾವುದೇ ಚರ್ಚೆಯಾಗಿಲ್ಲ. ಆದ್ದರಿಂದ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.