ಬೆಂಗಳೂರು: ನನ್ನ ಕುಟುಂಬದವರ ಬಗ್ಗೆ ಸದನದಲ್ಲಿ ಮಾಡಲಾದ ಆರೋಪ ಸಾಬೀತು ಮಾಡಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನೀಡಲು ಸಿದ್ಧನಿದ್ದೇನೆ ಎಂದು ಸಿಎಂ ಯಡಿಯೂರಪ್ಪ ವಿಪಕ್ಷಗಳ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ವಿಪಕ್ಷನಾಯಕರು ಮಂಡಿಸಿರುವ ಅವಿಶ್ವಾಸ ನಿರ್ಣಯ ವಿರೋಧಿಸಿ ವಿಧಾನಸಭೆಯಲ್ಲಿ ನಾನು ಮಾತನಾಡಿದೆ. ನನ್ನ ಕುಟುಂಬದವರ ಬಗ್ಗೆ ಸದನದಲ್ಲಿ ಮಾಡಲಾದ ಆರೋಪ ಸಾಬೀತು ಮಾಡುವ ಜವಾಬ್ದಾರಿ ಅವರ ಮೇಲಿದೆ. ಇದರಲ್ಲಿ ಸತ್ಯಾಂಶ ಇದ್ದರೆ ರಾಜೀನಾಮೆ ನೀಡುತ್ತೇನೆ. ಸಿಬಿಐಗಾದರೂ ಹೋಗಿ, ಹೈಕೋರ್ಟ್ ಗಾದರೂ ಹೋಗಿ. ಬಿಡಿಎ ಹಗರಣವನ್ನೂ ತನಿಖೆ ಮಾಡಿಸಿ ಎಂದು ವಿಪಕ್ಷಗಳ ಆರೋಪಕ್ಕೆ ಕಿಡಿಕಾರಿದ್ದಾರೆ.
ಕಾಂಗ್ರೆಸ್ ವಿಪಕ್ಷದ ಸ್ಥಾನದಲ್ಲಿ ಇರಬೇಕಾಗುತ್ತೆ ಎಂದು ಅವರ ಪಕ್ಷದ ವರಿಷ್ಠ ನಾಯಕರೇ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸೀಟು ಗೆದ್ದಿತು. ಜನರ ವಿಶ್ವಾಸವಿಲ್ಲದೆ ಗೆಲ್ಲೋಕೆ ಸಾಧ್ಯವಾಯಿತೇ? ಈಗ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ರೈತರು, ಕಾರ್ಮಿಕರು, ಹಿಂದುಳಿದವರು, ಎಲ್ಲರೂ ನಮ್ಮ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.
2008-2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಕೇವಲ 724 ಕೋಟಿ ರೂ. (SDRF) ಹಾಗೂ 2,669 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿತ್ತು. 2014 ರಿಂದ 2020 ರವರೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ 1,332 ಕೋಟಿ ರೂ. (SDRF) ಹಾಗೂ 9,279 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ವಿವರಿಸಿದ್ದಾರೆ.
2019-20ನೇ ಸಾಲಿನ ಆಗಸ್ಟ್ ಅಂತ್ಯಕ್ಕೆ 75,560 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೊರೊನಾದಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದ್ದರೂ ಪ್ರಸಕ್ತ ಸಾಲಿನಲ್ಲಿ 65,401 ಕೋಟಿ ರೂ. (ಬಜೆಟ್ ನ ಶೇ 27.4ರಷ್ಟು) ವೆಚ್ಚ ಮಾಡಲಾಗಿದೆ. 35-40 ಸಾವಿರ ಕೋಟಿ ರೂ. ಸಾಲ ಪಡೆದಾದರೂ ಸ್ಥಗಿತಗೊಂಡ ಬಿಲ್, ಕಾಮಗಾರಿ, ಬಜೆಟ್ ಜಾರಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರೇ, 2018ರಲ್ಲಿ ಚುನಾವಣೆ ಸಮಯದಲ್ಲಿ 15 ಲಕ್ಷ ಮನೆ ಕಟ್ಟಿಸಲು ಆದೇಶ ಮಾಡಿದಿರಿ, ಅದಕ್ಕೆ 29,000 ಕೋಟಿ ರೂ. ಬೇಕಾಗಿತ್ತು. ನೀವು ಬಜೆಟ್ ನಲ್ಲಿ ಇಟ್ಟಿದ್ದು 3,000 ಕೋಟಿ! ನೀರಾವರಿಗೆ ಬಜೆಟ್ ನಲ್ಲಿ 2,000 ಕೋಟಿ ಇಟ್ಟು, 1.03 ಲಕ್ಷ ಕೋಟಿ ರೂ. ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಿದ್ದೀರಿ. ಇದು ನಿಮ್ಮ ಆಡಳಿತ ವೈಖರಿ ವ್ಯಂಗ್ಯವಾಡಿದ್ದಾರೆ.
ಈ ರೀತಿ ಜನಹಿತವನ್ನು ಸಂಪೂರ್ಣ ಮರೆತು ರಾಜಕೀಯ ಮಾಡಿದಿರಿ. ಜನ ನಿಮಗೆ ಶಾಪ ಹಾಕುತ್ತಿದ್ದಾರೆ. ಅದಕ್ಕಾಗಿ ಲೋಕಸಭೆಯಲ್ಲಿ ಸೋತಿದ್ದೀರಿ, ವಿಧಾನಸಭೆಯಲ್ಲಿ ಸೋತಿದ್ದೀರಿ. ಈಗಲೂ ಜನ ನಿಮಗೆ ಉತ್ತರ ನೀಡಲಿದ್ದಾರೆ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.