ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಸೋಮವಾರ ಮುಂಜಾನೆ ಮೆಜೆಸ್ಟಿಕ್ನಲ್ಲಿ ಪ್ರತಿಭಟನೆಗೆ ಮುಂದಾದ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಮುಂಜಾನೆ 5.30ಕ್ಕೆ ಪ್ರತಿಭಟನೆ ಮಾಡಲು ಮುಂದಾದ ಪ್ರತಿಭಟನಾಕಾರರನ್ನು ಉಪ್ಪಾರ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದರಿಂದ 6ಗಂಟೆ ವೇಳೆ ಅಲ್ಲಿ ಪ್ರತಿಭಟನೆ ವಿಫಲಗೊಂಡಿತು.
ಇನ್ನು ಬೆಂಗಳೂರಿನ ರೈಲು ನಿಲ್ದಾಣದಲ್ಲಿ ರೈಲು ತಡೆಗೆ ಮುಂದಾದ ಕರವೇ ಸೇರಿ ಇತರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಆದರೆ ಪೊಲೀಸರ ನಡೆಯನ್ನು ಖಂಡಿಸಿ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ರೈತ ವಿರೋಧಿ ನೀತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಹೀಗಾಗಿ ಇಂದು ರಾಜ್ಯ ಸಂಪೂರ್ಣ ಬಂದ್ ಆಗಿರಲಿದೆ.
ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ರೈತರು ಈ ಹೋರಾಟ ಕೈಗೊಂಡಿದ್ದಾರೆ. ರೈತರೊಂದಿಗೆ ವಿವಿಧ ಸಂಘಟನೆಗಳು ಕೂಡ ಕೈ ಜೋಡಿಸಿವೆ. 35 ರೈತ ಪರ ಸಂಘಟನೆಗಳೊಂದಿಗೆ ಐಕ್ಯ ಹೋರಾಟ ಸಮಿತಿ, ರೈತ ಹೋರಾಟ ಸಂಘಟನೆಗಳು, ಕನ್ನಡಪರ ಹೋರಾಟ ಸಂಘಟನೆಗಳು, ನಾರಾಯಣಗೌಡರ ಕರವೇ ಸಂಘಟನೆ, ಪ್ರವೀಣ್ ಶೆಟ್ಟಿ ಕರವೇ ಬಣ, 25ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದ ವಿವಿಧ ಸಂಘಟನೆಗಳು, ಮಹಾದಯಿ ಹೋರಾಟ ಸಂಘಟನೆ, ಓಲಾ, ಊಬರ್, ಕ್ಯಾಬ್, ಆಟೋ,ಟ್ಯಾಕ್ಸಿ ಅಸೋಸಿಯೇಶನ್, ಆಟೋ ಮಿತ್ರ, ಪೀಸ್ ಆಟೋ ಸಂಘಟನೆ, ಖಾಸಗಿ ಟೂರಿಸ್ಟ್ ಮತ್ತು ಟ್ಯಾಕ್ಸಿ ಮಾಲೀಕರ ಸಂಘಗಳು ಹೋರಾಟಕ್ಕೆ ಬೆಂಬಲ ನೀಡಿವೆ.
ಸ್ಥಳೀಯವಾಗಿ ಬಹುತೇಕ ಪಕ್ಷಗಳು, ಸಂಘಟನೆಗಳು ಬಂದ್ ಬೆಂಬಲ ನೀಡಿವೆ. ಜೆಡಿಎಸ್ ಕೂಡ ಬಂದ್ಗೆ ಬೆಂಬಲ ನೀಡಿದೆ. ಈ ನಡುವೆ ಬಸ್, ಆಟೋ, ಟ್ಯಾಕ್ಸಿ ಸೇವೆ ಬಹುತೇಕ ಡೌಟು. ಆದರೆ ಆಸ್ಪತ್ರೆ, ಮೆಡಿಕಲ್ ತುರ್ತು ಸೇವೆಗಳು ಲಭ್ಯವಿರಲಿದೆ.