ಮೈಸೂರು: ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮೈಸೂರಿನಲ್ಲಿ ಬಂದ್ ಭಾಗಶಃ ವಿಫಲವಾಗಿದೆ. ಎಂದಿನಂತೆ ಜನಜೀವನ ಆರಂಭವಾಗಿದೆ.
9 ಗಂಟೆ ನಂತರ ಬಂದ್ ಬಿಸಿ ಕಡಿಮೆಯಾಗಿದೆ. ಮೈಸೂರಿನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿದೆ. ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಯಥಾ ಪ್ರಕಾರ ನಡೆಯುತ್ತಿದೆ. ರಾಜ್ಯದ ಅನೇಕ ಕಡೆ ರೈತರ ಆಕ್ರೋಶದ ಕಿಚ್ಚು ಎಲ್ಲೆ ಮೀರಿದೆ. ಆದರೆ ಮೈಸೂರಿನಲ್ಲಿ ಪ್ರತಿಭಟನೆಯ ಕಿಚ್ಚು ಕಾಣಿಸುತ್ತಿಲ್ಲ. ಕೇವಲ ಪ್ರತಿಭಟನೆಗೆ ಮಾತ್ರ ಬಂದ್ ಸೀಮಿತವಾದಂತಿದೆ.
ವಾಹನ ಸಂಚಾರ ಎಂದಿನಂತೆ ಆರಂಭವಾಗಿದೆ. ನಿತ್ಯದ ಚಟುವಟಿಕೆಗಳಿಗೆ ಯಾವುದೇ ಅಡೆತಡೆ ಇಲ್ಲ. ದೇವರಾಜು ಅರಸು ರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆಗಳಲ್ಲಿ ಸಹಜ ಸ್ಥಿತಿ ಕಂಡು ಬಂದಿದೆ. ಜತೆಗೆ ಅಂಗಡಿ ಮಾಲೀಕರು ಬಾಗಿಲು ತೆರೆದು ವ್ಯಾಪಾರಕ್ಕಿಳಿದಿದ್ದಾರೆ.
ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್
ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ರಸ್ತೆ ತಡೆದು ಪ್ರತಿಭಟನಾಕಾರರು ಕರ್ನಾಟಕ ಬಂದ್ ಬೆಂಬಲಿಸಿ ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆ ತಡೆದು ಧರಣಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.