ಬೆಂಗಳೂರು: ಇತ್ತೀಚೆಗಷ್ಟೇ ಮೈಸೂರು ಜಿಲ್ಲಾಧಿಕಾರಿಯಾಗಿ ಕಲಬುರಗಿಯಿಂದ ವರ್ಗಾವಣೆಗೊಂಡಿದ್ದ ಬಿ.ಶರತ್ ಅವರನ್ನು ರಾಜ್ಯ ಸರ್ಕಾರ ಸೋಮವಾರ ದಿಢೀರ್ ಎತ್ತಂಗಡಿ ಮಾಡಿದ್ದು, ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಇಂದು ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದು, ಆಗಸ್ಟ್ 29 ರಂದು ಕಲಬುರಗಿಯಿಂದ ಮೈಸೂರು ಡಿಸಿಯಾಗಿ ವರ್ಗಾವಣೆ ಗೊಂಡಿದ್ದ ಬಿ ಶರತ್ ಅವರನ್ನು ಒಂದು ತಿಂಗಳು ತುಂಬುವ ಮೊದಲೇ ಸ್ಥಳ ನಿಯುಕ್ತಿಗೊಳಿಸದೇ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಬಿ ಶರತ್ ಬರುವುದಕ್ಕಿಂತ ಹಿಂದೆ ಅಭಿರಾಮ್ ಜಿ. ಶಂಕರ್ ಡಿಸಿಯಾಗಿದ್ದರು.
ನಂಜನಗೂಡು ಟಿಎಚ್ಒ ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಅಭಿರಾಮ್ ಜಿ. ಶಂಕರ್ ಅವರನ್ನು ಎತ್ತಂಗಡಿ ಮಾಡಿ ಬಿ. ಶರತ್ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಕಮಾಡಲಾಗಿತ್ತು.