ಬೆಂಗಳೂರು: ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಭಾರತಕ್ಕೂ ಬಿಸಿ ತಟ್ಟುತ್ತಿದೆ. ಇದರಿಂದ ರಾಜ್ಯದ ವಿವಿಧೆಡೆ ಹೋಟೆಲ್ಗಳಿಗೆ ಎಲ್ಪಿಜಿ (LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಹಲವು ಹೋಟೆಲ್ಗಳು ಬಂದ್ ಆಗಿವೆ.

ಮತ್ತೊಂದೆಡೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಹೋದರೆ ಅದು ತೆಗೆದುಕೊಳ್ಳುತ್ತಿಲ್ಲ. ಇದರಿಂದ ಭಾರಿ ಸಮಸ್ಯೆಗೆ ಗೃಹಸ್ತರು ಸಿಲುಕಿಕೊಂಡಿದ್ದು ಅತ್ತ ಹೋಟೆಲ್ಗಳು ಇಲ್ಲ ಇತ್ತ ಮನೆಯಲ್ಲೂ ಆಹಾರ ಸಿದ್ಧಪಡಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ಕೂಡಲೇ ಪರಿಹಾರ ಮಾಡಬೇಕು ಎಂದು ಸರ್ಕಾರಗಳನ್ನು ಜನರು ಆಗ್ರಹಿಸುತ್ತಿದ್ದಾರೆ.
ಇಸ್ರೇಲ್-ಇರಾನ್ (Iran-Israel) ಯುದ್ದದ ಎಫೆಕ್ಟ್ನಿಂದಾಗಿ ಕರ್ನಾಟಕದಲ್ಲಿ ಸಿಲಿಂಡರ್ ಸಮಸ್ಯೆ ಮಿತಿ ಮೀರಿದೆ. ರಾಜ್ಯದ ರಾಮನಗರ, ಮೈಸೂರು, ಚಿಕ್ಕಬಳ್ಳಾಪುರ, ಧಾರವಾಡ, ಗದಗ ಸೇರಿದಂತೆ ರಾಜ್ಯದ ಹಲವೆಡೆ ಎಲ್ಪಿಜಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರು ಮತ್ತು ರಾಮನಗರದಲ್ಲೂ ಹೋಟೆಲ್ ಉದ್ಯಮಕ್ಕೆ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ವಿಳಂಬವಾಗ್ತಿದ್ದು, ಸಮರ್ಪಕವಾಗಿ ಎಲ್ಪಿಜಿ ಪೂರೈಕೆ ಆಗದಿರುವುದರಿಂದ ಕೆಲ ಹೋಟೆಲ್ಗಳು ಬಂದ್ ಕೂಡಾಗಿವೆ. ಇದೇ ಸ್ಥಿತಿ ಮುಂದುವರಿದರೆ ಇನ್ನೆರಡು ಮೂರು ದಿನಗಳಲ್ಲಿ ಇನ್ನಷ್ಟು ಹೋಟೆಲ್ಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಸಿಲಿಂಡರ್ ಜೊತೆಗೆ ಅಡುಗೆ ಎಣ್ಣೆ ಬೆಲೆಯಲ್ಲೂ ಏರಿಕೆಯಾಗಿದ್ದು, ಹೋಟೆಲ್ ಮಾಲೀಕರು ಹೈರಾಣಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸುವಂತೆ ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ. ಇನ್ನು, ಸಾಂಸ್ಕೃತಿಕ ರಾಜಧಾನಿ ಮೈಸೂರಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬಹಳಷ್ಟು ಹೋಟೆಲ್ಗಳು ವಾಣಿಜ್ಯ ಸಿಲಿಂಡರ್ಗಳು ಸಿಗದೆ ಅರ್ಧಕ್ಕೆ ವ್ಯಾಪಾರ ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಇನ್ನೊಂದು ವಾರ ಇದೇ ಪರಿಸ್ಥಿತಿ ಮುಂದುವರಿದರೆ ಮೈಸೂರಿನಲ್ಲಿ ಶೇ.70ರಷ್ಟು ಹೋಟೆಲ್ಗಳು ತಾತ್ಕಾಲಿಕವಾಗಿ ಮುಚ್ಚಲಿವೆ.
ಅಲ್ಲದೆ ಚಿಕ್ಕಬಳ್ಳಾಪುರದಲ್ಲೂ ಎಲ್ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಸಪ್ಲೈ ಬಂದ್ ಆಗಿದ್ದು, ಹೋಟೆಲ್ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನಿಂದಲೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಸಪ್ಲೈ ಆಗುತ್ತಿದ್ದು, ಈಗ ಸ್ಟಾಕ್ ಇಲ್ಲ ಎಂದು ಡಿಸ್ಟ್ರಿಬ್ಯೂಟರ್ಸ್ ಹೇಳ್ತಿದ್ರೆ, ಇದರಿಂದ ಸಹಜವಾಗಿ ಉಳಿದಿರೋ ಸಿಲಿಂಡರ್ಗಳ ಮೂಲಕ ಇತಿಮಿತಿಯಲ್ಲಿ ಗ್ಯಾಸ್ ಬಳಕೆ ಮಾಡುವಂತಾಗಿದ್ದು, ನಾಳೆ ಗ್ಯಾಸ್ ಸಪ್ಲೈ ಆಗದಿದ್ರೆ, ಹೋಟೆಲ್ ಬಂದ್ ಮಾಡುವ ಪರಿಸ್ಥಿತಿ ಎದುರಾಗಿದೆ.
ಹುಬ್ಬಳ್ಳಿ ಧಾರವಾಡ ನಗರದಲ್ಲಿ ಕೂಡಾ ಸಿಲಿಂಡರ್ ಸಿಕ್ತಿಲ್ಲ. ಕಮರ್ಷಿಯಲ್ ಸಿಲಿಂಡರ್ ಅಭಾವ ಸೃಷ್ಟಿ ಹಿನ್ನೆಲೆ ಧಾರವಾಡ ಹೋಟೆಲ್ ಮಾಲೀಕರ ಸಂಘದ ಮಹೇಶ ಶೆಟ್ಟಿ ಮಾತನಾಡಿದ್ದಾರೆ. ಎರಡು ಸಿಲಿಂಡರ್ ಕೇಳಿದರೆ ಒಂದನ್ನ ಕೊಡಲಾಗುತ್ತಿದೆ. ಐಒಸಿಯವರು ಟೋಟಲ್ ಸಿಲಿಂಡರ್ ಬಂದ್ ಮಾಡಿದ್ದಾರೆ. ಬಿಪಿಸಿಎಸ್ ಮತ್ತು ಹೆಚ್ಪಿಯವರು ಸಭೆ ಕರೆದಿದ್ದಾರೆ. ನಮ್ಮ ಹೋಟೆಲ್ ಉದ್ಯಮ ಸಿಲಿಂಡರ್ ಮೇಲೆ ಅವಲಂಬಿಸಿದೆ. ಸಿಲಿಂಡರ್ ಸಿಗದೇ ಇದ್ದಲ್ಲಿ ಹೋಟೆಲ್ ಉದ್ಯಮ ಸಂಪೂರ್ಣ ಬಂದ್ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಯುದ್ಧದ ಎಫೆಕ್ಟ್ ಗದಗ ಜಿಲ್ಲೆಯ ಹೋಟೆಲ್ಗಳಿಗೂ ತಟ್ಟಿದ್ದು, ಕಮರ್ಷಿಯಲ್ ಸಿಲಿಂಡರ್ ಸಪ್ಲೈ ಬಂದ್ ಆಗಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಾಗಿ ಹೋಟೆಲ್ನವರು ಪರದಾಡುವ ಪರಸ್ಥಿತಿ ಎದುರಾಗಿದೆ. ಸಿಲಿಂಡರ್ ಸಿಗದಕ್ಕೆ ಹೋಟೆಲ್ ಬಂದ್ ಆಗುವ ಆತಂಕ ಎದುರಾಗಿದೆ. ಹಾಗಾಗಿ ಸಿಲಿಂಡರ್ ಸಿಗುವವರೆಗೆ ಬಂದ್ ಮಾಡುವುದು ಅನಿವಾರ್ಯ. ಹೋಟೆಲ್ ಬಂದ್ ಆದ್ರೆ, ಸಾರ್ವಜನಿಕರು, ಮಾಲೀಕರು, ಸಿಬ್ಬಂದಿ ಸೇರಿದಂತೆ ಅನೇಕರಿಗೆ ತೊಂದರೆ ಆಗುತ್ತೆ. ಆದ್ದರಿಂದ ಕಮರ್ಷಿಯಲ್ ಸಿಲಿಂಡರ್ ಸಪ್ಲೈ ಮಾಡುವಂತೆ ಹೋಟೆಲ್ ಮಾಲೀಕರು ಆಗ್ರಹಿಸುತ್ತಿದ್ದಾರೆ.
Related










