ಬೆಂಗಳೂರು: ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾದ ಬಳಿಕ ರಾಜರಾಜೇಶ್ವರಿನಗರದಲ್ಲಿ ವಿಧಾನಸಭಾ ಉಪ ಚುನಾವಣಾ ಕಣ ರಂಗೇರಿದೆ. ಆರ್. ಮುನಿರತ್ನ ರಾಜೀನಾಮೆಯಿಂದ ತೆರವುಗೊಂಡ ಈ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಮೂರೂ ಪ್ರಮುಖ ಪಕ್ಷಗಳು ಸೆಣೆಸಾಟಕ್ಕೆ ಸಜ್ಜಾಗುತ್ತಿವೆ.
ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದ ನಾಯಕರು ಒಮ್ಮತ ಬಂದು ಒಬ್ಬ ಅಭ್ಯರ್ಥಿಯನ್ನು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಣಕ್ಕಿಳಿಸಬೇಕು. ಹೀಗಾದರೆ ಮಾತ್ರ ಮೈತ್ರಿ ಸರ್ಕಾರದ ಪತನಕ್ಕೆ ನೇರ ಕಾರಣವೆಂದು ಹೇಳಲಾಗುತ್ತಿರುವ ಮುನಿರತ್ನ ಅರನ್ನು ಸುಲಭವಾಗಿ ಸೋಲಿಸಬಹುದು ಎಂಬುವುದು ಕಾಂಗ್ರೆಸ್ ಕಾರ್ಯಕರ್ತರ ಮನದಾಳದ ಮಾತು ಎಂದು ಹೇಳಲಾಗುತ್ತಿದೆ.
ಹೌದು! ಎರಡೂ ಪಕ್ಷದ ನಾಯಕರು ಒಮ್ಮತದ ಅಭ್ಯರ್ಥಿಯನ್ನು ಹಾಕಲು ಮುಂದಾಗಬೇಕು ಎಂದು ಕಾಂಗ್ರೆಸ್ ನಾಯಕರ ಮೇಲೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಮೈತ್ರಿ ಸರ್ಕಾರದ ಪತನಕ್ಕೆ ನೇರ ಕಾರಣವೆಂದು ಹೇಳಲಾಗುವ ಎಸ್-ಬಿ-ಎ ತ್ರಯರಲ್ಲಿ ಮುನಿರತ್ನ ಸಹ ಒಬ್ಬರು. ಹೀಗಾಗಿ ಅವರ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಕೈ ಜೋಡಿಸಲೇ ಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ನಿಲುವಾಗಿದೆ ಎನ್ನಲಾಗುತ್ತಿದೆ.
ಈಗಾಗಲೇ, ಜೆಡಿಎಸ್ ನಾಯಕ ಹನುಮಂತರಾಯಪ್ಪ ಜತೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಈ ಕುರಿತು ಒಂದು ಬಾರಿ ಮಾತುಕತೆ ನಡೆಸಿದ್ದಾರೆ. ಇದರೊಟ್ಟಿಗೆ, ಕುಮಾರಸ್ವಾಮಿ ಜತೆ ಮಾತುಕತೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೂ ಸಹ ಪಕ್ಷದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಟಾರ್ಗೆಟ್ ಮುನಿರತ್ನ
ಉಭಯ ಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದ್ರೆ ಮಾತ್ರ ಮುನಿರತ್ನ ಸೋಲು ಖಚಿತ. ಟಾರ್ಗೆಟ್ ಮುನಿರತ್ನ ಯಶಸ್ವಿ ಆಗಲೇ ಬೇಕು ಅಂತಿರೋ ಕಾಂಗ್ರೆಸ್ ಕಾರ್ಯಕರ್ತರು ದೋಸ್ತಿ ಸರ್ಕಾರ ಪತನಕ್ಕೆ ಕಾರಣ ಮುನಿರತ್ನ ಎಂದು ಕಿಡಿಕಾರುತ್ತಿರುವ ಕಾರ್ಯಕರ್ತರು, ಸಿಕ್ಕಿರೋ ಅವಕಾಶ ಬಿಡಲೇಬಾರದು. ಅದಕ್ಕಾಗಿ, ಶಿವಕುಮಾರ್ ಹಾಗೂ ಕುಮಾರಸ್ವಾಮಿ ಒಂದಾಗಿ ಅಭ್ಯರ್ಥಿ ಹಾಕಬೇಕು ಎಂಬ ಒತ್ತಡ ಹೇರಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಶಿವಕುಮಾರ್ ಅವರನ್ನು ಭೇಟಿಯಾಗಿ ಆರ್‌ಆರ್ ನಗರ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದಾರೆ.
ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಕೈ ಟಿಕೆಟ್ ಆಕಾಂಕ್ಷಿ
ಈ ನಡುವೆ, ಆದಿಚುಂಚನಗಿರಿ ಮಠಕ್ಕೆ ಮಾಜಿ ಐಎಎಸ್ ಅಧಿಕಾರಿ, ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಭೇಟಿ ನೀಡಿದ್ದು, ತಮ್ಮ ತಂದೆ ಹನುಮಂತರಾಯಪ್ಪ ಜತೆ ವಿಜಯನಗರದಲ್ಲಿರುವ ಶಾಖಾ ಮಠಕ್ಕೆ ಭೇಟಿ ಕೊಟ್ಟು ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದರು. ಕುಸುಮಾ ಆರ್‌ಆರ್ ನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಪಕ್ಷದ ನಾಯಕರು ಇನ್ನು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.