ಮೈಸೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಶಾಸಕ ಸಾ.ರಾ. ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ಸ್ಪೆಕ್ಟರ್ ಒಬ್ಬರ ವರ್ಗಾವಣೆಗೆ 20 ಲಕ್ಷ ರೂ. ಕೇಳುತ್ತಿದ್ದಾರೆ. ಹೀಗೆಯೇ ಎಲ್ಲ ವರ್ಗಾವಣೆಗಳೂ ದುಡ್ಡಿನಿಂದಲೇ ಆಗುತ್ತಿವೆ. ಈ ಬಗ್ಗೆ ನಾನು ಮೊದಲೇ ಹೇಳಿದ್ದೆ, ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು. ಇದಕ್ಕೆ ಮೈಸೂರಿನಲ್ಲಿ ಪೊಲೀಸರ ವರ್ಗಾವಣೆ ಆಗುತ್ತಿರುವುದೇ ಸಾಕ್ಷಿ. ಸರಕಾರ ರಚನೆಯಾದಂದಿನಿಂದ ಇಲ್ಲಿಯವರೆಗೂ ಇದು ನಡೆಯುತ್ತಲೇ ಇದೆ ಎಂದು ಆರೋಪಿಸಿದರು.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಬಹುಕೋಟಿ ಹಣ ದುರ್ಬಳಕೆ ಆರೋಪ ಮಾಡಿರುವ ಸಾ.ರಾ. ಮಹೇಶ್ ಆಂಧ್ರಪ್ರದೇಶದ ಖಾಸಗಿ ಸಂಸ್ಥೆಗೆ ರೋಹಿಣಿ ಸಿಂಧೂರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅದರ ಪ್ರತಿಫಲವಾಗಿ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಸ್ಥಾನ ಉಡುಗೊರೆಯಾಗಿ ಸಿಕ್ಕಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅನುಭವದ ವಯಸ್ಸು ಸಾ.ರಾ. ಮಹೇಶ್ ಅವರಿಗೆ ಆಗಿಲ್ಲ ಎಂಬ ಶಾಸಕ ಎಲ್. ನಾಗೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಾರಾ ಮೊದಲ ಬಾರಿಗೆ ಶಾಸಕರಾದವರ ಬಗ್ಗೆ ನಾನು ಆರೋಪ ಮಾಡುತ್ತಿಲ್ಲ, ಉತ್ತರ ಕೊಡಿ ಎಂದು ಕೇಳುತ್ತಿದ್ದೇನೆ ಅಷ್ಟೆ ಎಂದು ಟಾಂಗ್ ಕೊಟ್ಟರು.
ಈ ದಾಖಲೆಗಳನ್ನು ತೆಗೆದುಕೊಳ್ಳಿ, ಇದಕ್ಕೆ ಉತ್ತರ ಕೊಡಲು ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಹೇಳಿ ಎಂದು ಸುದ್ದಿಗಾರರಿಗೆ ದಾಖಲೆ ತೋರಿಸಿದ ಅವರು, ಈ ಬಗ್ಗೆ ಆಡಳಿತಾರೂಢ ಶಾಸಕರು ಹೆಚ್ಚು ಮಾತನಾಡಲಿ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ತಪ್ಪಾ ಎಂದು ಪ್ರಶ್ನಿಸಿದರು. ಅಲ್ಲದೇ ಈ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕರು ಚಿಂತಿಸಲಿ ಎಂದು ತಿರುಗೇಟು ನೀಡಿದರು.