ಮೈಸೂರು: ಸಿನಿಮಾ, ಧಾರವಾಹಿಯಲ್ಲಿ ಚಾನ್ಸ್ ಕೊಡಿಸುವುದಾಗಿ 50 ಕ್ಕೂ ಹೆಚ್ಚು ಮಹಿಳೆಯರನ್ನು ನಂಬಿಸಿ ಅವರಿಂದ ಹಣ ಸುಲಿಗೆ ಮಾಡಿ ವಂಚಿಸಿರುವ ಘಟನೆ ಅರಮನೆಗಳ ನಗರಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಗಿರೀಶ್ ಅಲಿಯಾಸ್ ಸಿನಿಮಾ ಗಿರೀಶ್ ಎಂಬಾತನೆ ವಂಚಕನಾಗಿದ್ದು, ಈತನ ವಿರುದ್ಧ ಮೋಸಹೋದ ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈತ ಮೈಸೂರಿನ ಗುರುಕಾರ್ ರೇವಣ್ಣ ರಸ್ತೆಯ ನಿವಾಸಿ. ಸಿನಿಮಾ, ಧಾರವಾಹಿಯಲ್ಲಿ ಮಿಂಚಬೇಕು ಎಂಬ ಆಸೆಯಿಂದ ಈತನ ಬಳಿಗೆ ಬಂದ ಬರೋಬ್ಬರಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ವಂಚಕ ಮಹಿಳೆಯರನ್ನು ನಂಬಿಸಲು ಮಹಿಳೆಯರಿಂದ ಹಣ ಪಡೆಯುವಾಗ ತಾನೇ ವಿಡಿಯೋ ಮಾಡುತ್ತಿದ್ದ. ಆ ಮೂಲಕ ಮಹಿಳೆಯರ ನಂಬಿಕೆಯನ್ನು ಇನ್ನಷ್ಟು ಗಳಿಸುತ್ತಿದ್ದ. ಈತ ವಂಚನೆ ಮಾತ್ರವಲ್ಲದೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮೋಸಕ್ಕೊಳಗಾದ ಕೆಲ ಮಹಿಳೆಯರು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಮೊದಲು ಸಿನಿಮಾ, ಧಾರಾವಾಹಿಗೆ ಕಲಾವಿದರು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುತ್ತಿದ್ದ. ಆ ಜಾಹೀರಾತು ನೋಡಿ ಈತನನ್ನು ಭೇಟಿ ಮಾಡಿದವರಿಗೆ ತಾನೇ ಕಥೆ ಹೇಳಿ ಯಾಮಾರಿಸಿದ್ದಾನೆ. ಕೆಲವರಿಗೆ ತಾನು ಪೊಲೀಸ್ ಎಂದು ಕೂಡ ಸುಳ್ಳು ಹೇಳಿದ್ದಾನೆ.
ವಂಚಕನ ಕಟ್ಟುಕತೆಯನ್ನು ನಂಬಿದ ಹಲವರು ಬಳಿಕ ಈತ ಮೋಸಗಾರ ಎಂದು ತಿಳಿದು ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿ ಗಿರೀಶ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಖತರ್ನಾಕ್ ಗಿರೀಶ್‌ನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ತಮಗೆ ನ್ಯಾಯ ಕೊಡಿಸುವಂತೆ ನಗರ ಪೊಲೀಸ್ ಕಮಿಷನರ್‌ಗೂ ಮಹಿಳೆಯರು ಮನವಿ ಮಾಡಿದ್ದಾರೆ.
Olledu bidi